ಮಾಹಿತಿ ಹಂಚಿಕೆಗೆ ವಾಟ್ಸಾೃಪ್ ಗ್ರೂಪ್

GESCOM
ಜೆಸ್ಕಾಂ ಸಿಬ್ಬಂದಿ ಆರಂಭಿಸಿರುವ ಕನಕಗಿರಿ ವಿದ್ಯುತ್ ಮಿತ್ರ ವಾಟ್ಸಾೃಪ್ ಗ್ರೂಪ್‌ನಲ್ಲಿ ಜಿಪಿಎಸ್ ಫೋಟೊ ಸಹಿತ ಮಾಹಿತಿ ಹಾಕಿರುವುದು.
Published on

ಕನಕಗಿರಿ: ವಿದ್ಯುತ್ ಪೂರೈಕೆ ಮತ್ತು ವ್ಯತ್ಯಯ ಆಗುವ ಸಮಯ-ಕಾರಣ ತನ್ನ ವ್ಯಾಪ್ತಿಯ ಜನ ಸಾಮಾನ್ಯರಿಗೂ ತಿಳಿಯಲಿ ಎಂದು ಇಲ್ಲಿನ ಜೆಸ್ಕಾಂ ಶಾಖೆಯು ವಾಟ್ಸಾೃಪ್ ಗ್ರೂಪ್ ರಚಿಸಿ ಜನಸ್ನೇಹಿ ಕಾರ್ಯಕ್ಕೆ ಮುಂದಾಗಿದೆ.

ಹೌದು, ಪ್ರಸ್ತುತ ದಿನಗಳಲ್ಲಿ ಜನ ಜೀವನಕ್ಕೆ ವಿದ್ಯುತ್ ಅಗತ್ಯವಾಗಿದೆ. ವಿದ್ಯುತ್ ಪೂರೈಕೆಯಲ್ಲಿ ಕೆಲವೊತ್ತು ವ್ಯತ್ಯಯವಾದರೂ ಕೃಷಿ, ಕೈಗಾರಿಕೆ, ವಾಣಿಜ್ಯ ಅಲ್ಲದೇ ಬಹುತೇಕ ಕ್ಷೇತ್ರದ ಕೆಲಸಗಳು ಸ್ಥಗಿತಗೊಳ್ಳುತ್ತವೆ. ಇನ್ನು ಕನಕಗಿರಿ ಹಾಗೂ ಸುತ್ತಲಿನ ಗ್ರಾಮಗಳು ಕೃಷಿ ಆಧಾರಿತ ಆಗಿರುವುದರಿಂದ ಹೊಲ-ಗದ್ದೆಗಳಲ್ಲಿನ ಪಂಪ್‌ಸೆಟ್-ಮೋಟಾರ್‌ಗಳಿಗಾಗಿ, ಗೃಹ ಬಳಕೆಗಾಗಿ ವಿದ್ಯುತ್ ಅವಶ್ಯಕ.

ಹೀಗಿರುವಾಗ ಜೆಸ್ಕಾಂನಿಂದ ಪಾಲನೆ ಆಗುವ ವೇಳಾಪಟ್ಟಿ ಮತ್ತು ತುರ್ತು ಸಂದರ್ಭಗಳಲ್ಲಿ ವಿದ್ಯುತ್ ಪೂರೈಕೆ ಮತ್ತು ವ್ಯತ್ಯಯದ ಮಾಹಿತಿ ಜನರಿಗೆ ತಿಳಿಸಲು, ನೇರವಾಗಿ ಕರೆ ಮಾಡುವುದನ್ನು ಮತ್ತು ಕೆಲಸದಲ್ಲಿ ನಿರತರಾದಾಗ ಸಮಯ ವ್ಯರ್ಥ ಮಾಡುವುದನ್ನು ತಪ್ಪಿಸಲು ಹಾಗೂ ವಿದ್ಯುತ್ ಅವಘಡಗಳ ಮಾಹಿತಿ ಹಂಚಿಕೆಗಾಗಿ ಜೆಸ್ಕಾಂ ಶಾಖೆಯು ವಾಟ್ಸಾೃಪ್ ಗ್ರೂಪ್ ರಚಿಸಿ ಸಾರ್ವಜನಿಕರ ಪ್ರಶ್ನೆ ಮತ್ತು ಸಮಸ್ಯೆಗಳಿಗೆ ಪ್ರತ್ಯುತ್ತರ-ಇತ್ಯರ್ಥ ಪ್ರಯತ್ನ ಮಾಡಿದೆ.

ಫೀಡರ್‌ಗೊಂದು ಗ್ರೂಪ್: ಕನಕಗಿರಿ ಜೆಸ್ಕಾಂ ಶಾಖೆ ವ್ಯಾಪ್ತಿಯಲ್ಲಿ ಒಟ್ಟು 16,509 ಆರ್‌ಆರ್ ಸಂಖ್ಯೆಯ ಮೀಟರ್‌ಗಳು ಕೆಲಸ ನಿರ್ವಹಿಸುತ್ತಿದ್ದು, ಕನಕಗಿರಿ 110 ಕೆವಿ, ಸೂಳೇಕಲ್ 220 ಕೆವಿ, ಮುಸಲಾಪುರ 33 ಕೆವಿ ಒಳಪಡುತ್ತವೆ. ಮುಸಲಾಪುರ ಫೀಡರ್‌ಗೆ ಜೆಸ್ಕಾಂ ಫೀಡರ್ ಹೆಸರಿನ ಗ್ರೂಪ್‌ನಲ್ಲಿ 811 ಜನರು, ಹುಲಿಹೈದರ ಲೈನ್‌ನಲ್ಲಿ 383 ಜನರು, ಸೂಳೇಕಲ್ ಲೈನ್‌ನಲ್ಲಿ 300 ಜನರಿದ್ದು, ಗೌರಿಪುರ ಹಾಗೂ ದೇವಲಾಪುರ ಫೀಡರ್‌ನಲ್ಲಿ ತಲಾ 100ಕ್ಕೂ ಹೆಚ್ಚು ಸದಸ್ಯರನ್ನು ವಾಟ್ಸಾೃಪ್ ಗ್ರೂಪ್‌ಗೆ ಸೇರಿಸಲಾಗಿದೆ. ಈ ಗ್ರೂಪ್‌ಗಳಲ್ಲಿ ಆಯಾ ಗ್ರಾಮಗಳಲ್ಲಿ ಉಂಟಾಗುವ ವಿದ್ಯುತ್ ವ್ಯತ್ಯಯಕ್ಕೆ ಕಾರಣವನ್ನು ಸಿಬ್ಬಂದಿ ತಿಳಿಸುತ್ತಾರೆ.

ಪಟ್ಟಣದ ಗ್ರೂಪ್‌ನಲ್ಲಿ 1,024 ಸದಸ್ಯರು: ಕನಕಗಿರಿ ಪಟ್ಟಣದ ವಿವಿಧ ಇಲಾಖೆಗಳ ಅಧಿಕಾರಿ-ಸಿಬ್ಬಂದಿ ವರ್ಗ, ರಾಜಕಾರಣಿಗಳು, ಮಾಧ್ಯಮದವರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಒಟ್ಟು 1,024 ಸದಸ್ಯರು ಗ್ರೂಪ್‌ನಲ್ಲಿದ್ದಾರೆ. ಜೆಸ್ಕಾಂ ಸಿಬ್ಬಂದಿ ಗ್ರೂಪ್ ಅಡ್ಮಿನ್ ಇದ್ದು, ಇವರು ಮಾತ್ರ ಸಂದೇಶ ಕಳಿಸುವಂತೆ ಸಂಯೋಜಿಸಲಾಗಿದೆ. ವಿದ್ಯುತ್ ವ್ಯತ್ಯಯ ಆಗಿರಲು ಕಾರಣ ಮತ್ತು ಜಿಪಿಎಸ್ ಫೋಟೋಗಳನ್ನು ಸಿಬ್ಬಂದಿ ಗ್ರೂಪ್‌ನಲ್ಲಿ ತ್ವರಿತವಾಗಿ ಕಳಿಸಿಬಿಡುತ್ತಾರೆ.

ಮೇಲಧಿಕಾರಿಗಳ ಸಲಹೆ ಮೇರೆಗೆ ವಾಟ್ಸಾೃಪ್ ಗ್ರೂಪ್ ಆರಂಭಿಸಲಾಗಿದೆ. ವಿದ್ಯುತ್ ಕಡಿತಕ್ಕೆ ಕಾರಣ ಹೇಳಿಕೊಳ್ಳುವುದಕ್ಕೆ ಸಹಕಾರಿಯಾಗಿದೆ. ಎಲ್ಲೇ ವಿದ್ಯುತ್ ಅವಘಡಗಳಾದರೆ ಜನರು ನನ್ನ ವೈಯಕ್ತಿಕವಾಗಿ ಸಂಪರ್ಕಿಸಿ ತಿಳಿಸಿದ ಕೂಡಲೇ ಗ್ರೂಪ್‌ಗೆ ಮಾಹಿತಿ ನೀಡಿ ಸಮಸ್ಯೆ ಇತ್ಯರ್ಥಕ್ಕೆ ಮುಂದಾಗುತ್ತೇವೆ. ಇದರಿಂದ ಗ್ರಾಹಕರಿಗೆ ಸರಿಯಾದ ಮಾಹಿತಿ ದೊರೆಯಲಿದೆ.

ಸಿದ್ದನಗೌಡ

ಶಾಖಾಧಿಕಾರಿ, ಜೆಸ್ಕಾಂ ಕನಕಗಿರಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net