

ಕನಕಗಿರಿ: ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಬಳಿಕ ಸಚಿವ ಶಿವರಾಜ ತಂಗಡಗಿ ಪಟ್ಟಣಕ್ಕೆ ಮೊದಲ ಬಾರಿಗೆ ಸೋಮವಾರ ಸಂಜೆ ಆಗಮಿಸಿದ ಹಿನ್ನೆಲೆಯಲ್ಲಿ ಸ್ವಾಗತಕ್ಕಾಗಿ ಕಾಯುತ್ತಿರುವ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರಿಗಾಗಿ ಪಪಂ ಸದಸ್ಯರೊಬ್ಬರು 20 ಲೀಟರಿನ 6 ಕ್ಯಾನ್‌ಗಳಲ್ಲಿ ಮದ್ಯದ ವ್ಯವಸ್ಥೆ ಕಲ್ಪಿಸಿರುವುದು ಚರ್ಚೆಗೆ ಗ್ರಾಸವಾಗಿದೆ.
ಕನಕಗಿರಿ ವಿಧಾನಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿರುವ ಸಚಿವ ತಂಗಡಗಿ, ಮೂರನೇ ಬಾರಿಗೂ ಮಂತ್ರಿಯಾಗಿದ್ದ ಹಿನ್ನೆಲೆಯಲ್ಲಿ ಪಟ್ಟಣದ ಶ್ರೀ ಕನಕಾಚಲಪತಿಗೆ ಪೂಜೆ ಸಲ್ಲಿಸಲು ಆಗಮಿಸುತ್ತಿರುವಾಗ ಸಾವಿರಾರು ಕಾರ್ಯಕರ್ತರು ಸೇರಿದ್ದರು.
ಹೀಗೆ ಬಂದ ಕಾರ್ಯಕರ್ತರನ್ನು ಸಂತೈಸಲು ಪಪಂ 2ನೇ ವಾರ್ಡಿನ ಸದಸ್ಯ ನೂರ್‌ಸಾಬ್ ಗಡ್ಡಿಗಾಲರು ತಮ್ಮ ಮನೆಯಲ್ಲಿ 20 ಲೀಟರ್‌ನ 6 ಬಾಟಲಿಗಳಲ್ಲಿ ಎಣ್ಣೆ ವ್ಯವಸ್ಥೆ ಕಲ್ಪಿಸಿದ್ದಾರೆ ಎನ್ನಲಾಗಿದೆ.
ಜತೆಗೆ 20 ಲೀ. ಬಾಟಲಿಯಿಂದ ಕುಡಿಯಲು ಗ್ಲಾಸ್, ಬಾಯಿ ಚಪಲ ತೀರಿಸಿಕೊಳ್ಳಲು ಸ್ನ್ಯಾಕ್ಸ್‌ಗಳನ್ನು ಇಳಿಬಿಟ್ಟಿರುವುದನ್ನು ತಾವೇ ವಿಡಿಯೋ ಮಾಡಿ ಹರಿಬಿಟ್ಟಿರುವುದರಿಂದ ಬಹಿರಂಗಗೊಂಡಿದೆ. ಭರ್ಜರಿ ಉಪಾಹಾರ ಮಾಡಲು ಕೂಡ ವ್ಯವಸ್ಥೆ ಮಾಡಿರುವ ವಿಡಿಯೋ ಹಾಗೂ ಫೋಟೊಗಳು ಅವರಿಂದಲೇ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಚುನಾವಣೆ ಮುಂಚೆ ನಂತರವೂ ಕನಕಗಿರಿಯಲ್ಲಿ ಶಿವರಾಜ ತಂಗಡಗಿ ಬೆಂಬಲಿಗರು, ಕಾರ್ಯಕರ್ತರು ಗೆಲುವಿನ ಖುಷಿಯಲ್ಲಿ ಮದ್ಯದಲ್ಲಿ ತೇಲಾಡುತ್ತಿರುವುದು ನೀರಿನ ಕ್ಯಾನ್‌ಗಳಲ್ಲಿ ತುಂಬಿದ ಮದ್ಯವೇ ನಿದರ್ಶನ ಎನ್ನಲಾಗುತ್ತಿದೆ. ಇದಕ್ಕೆ ಅವರದೇ ಪಕ್ಷದ ಕೆಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು ಮಂತ್ರಿಯಾಗುತ್ತಿದ್ದಂತೆ ಹಾರ, ತುರಾಯಿ, ಶಾಲುಗಳನ್ನು ತಿರಸ್ಕರಿಸಿರುವ ಸಚಿವ ತಂಗಡಗಿಗೆ ಈ ರೀತಿಯಾಗಿ ಬಾಟಲಿಗಳಲ್ಲಿ ಎಣ್ಣೆ ವ್ಯವಸ್ಥೆ ಮಾಡಿರುವುದು ಮುಜುಗರಕ್ಕೀಡಾಗುವಂತೆ ಮಾಡಿದೆ.