

ಕನಕಗಿರಿ: ಅಂತರ್ಜಲ ಕುಸಿತದಿಂದಾಗಿ ಸಿಸಿ ರಸ್ತೆ ನಿರ್ಮಾಣಕ್ಕೆ ಅವಕಾಶವಿಲ್ಲದಂತಾಗಿದೆ. ಮುಂದಿನ ದಿನಗಳಲ್ಲಿ ಫೇವರ್ಸ್ ಇಲ್ಲವೇ ಡಾಂಬರೀಕರಣಕ್ಕೆ ಆದ್ಯತೆ ನೀಡಲಾಗುವುದು ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ದತ್ತಾತ್ರೇಯ ಹೆಗಡೆ ಹೇಳಿದರು.
ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಪಟ್ಟಣ ಪಂಚಾಯಿತಿ ಪ್ರಸಕ್ತ ಸಾಲಿನ ಆಯ-ವ್ಯಯ ಮಂಡನೆ ವರದಿ ತಯಾರಿಕೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
2024-25ನೇ ಸಾಲಿಗೆ ಎಸ್‌ಎಫ್‌ಸಿ ಮುಕ್ತನಿಧಿ, ಕುಡಿವ ನೀರು, 15ನೇ ಹಣಕಾಸು, ಎಸ್‌ಎಫ್‌ಸಿ ವೇತನ, ಬೀದಿದೀಪ ಹಾಗೂ ನೀರಿನ ಅನುದಾನ, ಆಸ್ತಿ ತೆರಿಗೆ, ನೀರಿನ ತೆರಿಗೆ, ಜಾಹೀರಾತು ತೆರಿಗೆ, ಉದ್ದಿಮೆ ತೆರಿಗೆ ಇತರ ತೆರಿಗೆ ಸೇರಿ ಒಟ್ಟು 6,48,55,000 ರೂ.ಅಂದಾಜಿಸಲಾಗಿತ್ತು. ಆದರೆ 2,47,18,600 ರೂ. ಸಂಗ್ರಹವಾಗಿದೆ ಎಂದರು.
ಅವೈಜ್ಞಾನಿಕ ಸಿಸಿ ರಸ್ತೆ ನಿರ್ಮಾಣಕ್ಕೆ ಅವಕಾಶವಿಲ. ಇದನ್ನು ಕೇವಲ ಅಧಿಕಾರಿಗಳು, ಜನಪ್ರತಿನಿಧಿಗಳು ಮಾತ್ರವಲ್ಲದೇ ಮುಖ್ಯವಾಗಿ ಜನರು ಅರ್ಥೈಸಿಕೊಳ್ಳಬೇಕು. ಮುಂದಿನ ದಿನಗಳಲ್ಲಿ ಫೇವರ್ಸ್ ಇಲ್ಲವೇ ಡಾಂಬರೀಕರಣಕ್ಕೆ ಆದ್ಯತೆ ನೀಡಲಾಗುವುದು. ಅಲ್ಲದೆ, ಈಗಾಗಲೇ ಹದಗೆಟ್ಟಿರುವ ರಸ್ತೆಗಳನ್ನು ಸಹ ಹಂತ ಹಂತವಾಗಿ ವೈಜ್ಞಾನಿಕವಾಗಿ ನಿರ್ಮಾಣ ಮಾಡಲಾಗುವುದು ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ ಮಾತನಾಡಿ, ಪಟ್ಟಣದ ಅಭಿವೃದ್ಧಿಗೆ ವಿಶೇಷ ಅನುದಾನ ತರಲು ಪಕ್ಷಾತೀತವಾಗಿ ಆಡಳಿತ ಮಂಡಳಿ ಸಚಿವರಿಗೆ ಒತ್ತಾಯಿಸಬೇಕು. ಸೈನಿಕರಂತೆ ಕೆಲಸ ಮಾಡುವ ಪೌರ ಕಾರ್ಮಿಕರಿಗೆ ಸಕಾಲಕ್ಕೆ ವೇತನ ಪಾವತಿಸಲು ಕ್ರಮ ವಹಿಸಬೇಕು. ಬೇಸಿಗೆಯಲ್ಲಿ ನೀರಿನ ಅಭಾವವಾಗದಂತೆ ಕ್ರಮ ವಹಿಸಬೇಕು ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ ಮಾತನಾಡಿ, ಪಟ್ಟಣದ ಅಭಿವೃದ್ಧಿಗಾಗಿ ನಗರೋತ್ಥಾನ ಯೋಜನೆಯಡಿ ಸಚಿವರು 10 ಕೋಟಿ ರೂ. ಅನುದಾನದಲ್ಲಿ ಕ್ರಿಯಾಯೋಜನೆ ತಯಾರಿಸಲು ಸೂಚಿಸಿದ್ದಾರೆ. ಪಟ್ಟಣದ ಅಂಧಕ್ಕಾಗಿ ರಸ್ತೆ ಒತ್ತುವರಿಯನ್ನು ನವಲಿ ರಸ್ತೆ ಹಾಗೂ ತಾವರಗೇರಾ ರಸ್ತೆಯ ಒಂದು ಕಡೆಗೆ ತೆರವುಗೊಳಿಸಲಾಗಿದೆ. ಇನ್ನೊಂದು ಬದಿಯಲ್ಲಿ ತೆರವು ಕಾರ್ಯ ಮಾಡಿಲ್ಲ. ಇದರಿಂದ ತಾರತಮ್ಯ ಮಾಡಿದಂತಾಗುತ್ತದೆ. ಈಗಾಗಲೇ ಸಣ್ಣ ವ್ಯಾಪಾರಿಗಳು ಆಡಳಿತ ಮಂಡಳಿ ಉಳ್ಳವರ ಪರವಿದ್ದಾರೆ ಎಂದು ಮಾತನಾಡಿಕೊಳ್ಳುವಂತಾಗಿದೆ. ಉಳಿದ ಭಾಗವು ತೆರವುಗೊಳಿಸುವ ಕಾರ್ಯ ಮಾಡಬೇಕು. ಇಲ್ಲದಿದ್ದರೆ ತೆರವುಗೊಳಿಸಿದ ಜಾಗದಲ್ಲಿ ಈ ಮೊದಲಿನಂತೆ ಅಂಗಡಿಗಳನ್ನು ಆರಂಭಿಸಲಾಗುವುದು ಎಂದು ತಿಳಿಸಿದರು.
ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ರಾಜಾಸಾಬ್ ನಂದಾಪುರ, ಸಂಗಪ್ಪ ಸಜ್ಜನ್, ಅಭಿಷೇಕ ಕಲುಬಾಗಿಲಮಠ, ನಂದಿನಿ, ಸುರೇಶ ಗುಗ್ಗಳಶೆಟ್ರ, ರಾಕೇಶ, ತನುಶ್ರೀ, ಶೇಷಪ್ಪ ಪೂಜಾರ, ಹನುಮಂತ ಬಸರಿಗಿಡ ಇತರರಿದ್ದರು.
ಖುರ್ಚಿ ಖಾಲಿ ಖಾಲಿ: ಬಜೆಟ್ ಪೂರ್ವಭಾವಿ ಸಭೆಯಲ್ಲಿ ಸಾರ್ವಜನಿಕರಿಲ್ಲದ ಕಾರಣ ಖುರ್ಚಿಗಳು ಖಾಲಿ ಖಾಲಿಯಾಗಿದ್ದವು. ವೇದಿಕೆ ಮೇಲೆ ಜನಪ್ರತಿನಿಧಿಗಳು ಆಸೀನರಾಗಿದ್ದರೆ, ಕೆಳಗಡೆ ಪಂಚಾಯಿತಿ ಸಿಬ್ಬಂದಿ ಹಾಗೂ ಪಕ್ಷದ ಮುಖಂಡರು ಮಾತ್ರ ಇದ್ದರು. ಬೆರಳೆಣಿಕೆಯಷ್ಟು ಜನ ಕಂಡರು.