

ಕನಕಗಿರಿ: ಇಲ್ಲಿನ ಮಾಂಸದಂಗಡಿಗಳಲ್ಲಿ ನಿತ್ಯ ಸಂಗ್ರಹವಾಗುವ ಕೋಳಿ ತ್ಯಾಜ್ಯವನ್ನು ರಸ್ತೆ ಪಕ್ಕದಲ್ಲಿ ವಿಲೇವಾರಿ ಮಾಡುವುದರಿಂದ ಪಟ್ಟಣಕ್ಕೆ ಆಗಮಿಸುವವರಿಗೆ ದುರ್ನಾತದ ಸ್ವಾಗತ ದೊರೆಯುತ್ತಿದೆ. ಇಲ್ಲಿನ ವಾಲ್ಮೀಕಿ ವೃತ್ತ, ನವಲಿ ರಸ್ತೆ, ತಾವರಗೇರಾ ರಸ್ತೆ, ಮೇಲುಗಡೆ ಅಗಸೆ ಸೇರಿ ನಾನಾ ಕಡೆಗಳಲ್ಲಿ ಮಾಂಸದಂಗಡಿಗಳಿವೆ.
ಈ ಅಂಗಡಿಗಳಲ್ಲಿ ನಿತ್ಯ ಮಾಂಸಕ್ಕಾಗಿ ಕೋಳಿಗಳನ್ನು ವಧೆ ಮಾಡಲಾಗುತ್ತದೆ. ಇದರಿಂದ ಉಂಟಾಗುವ ತ್ಯಾಜ್ಯವನ್ನು ಅಂಗಡಿಯವರು ವೈಜ್ಞಾನಿಕವಾಗಿ ವಿಲೇವಾರಿ ಮಾಡದೇ ಕತ್ತಲಾದ ಬಳಿಕ ನವಲಿ, ತಾವರಗೇರಾ, ಗಂಗಾವತಿ ರಸ್ತೆಗಳ ಪಕ್ಕದಲ್ಲಿ ವಿಲೇವಾರಿ ಮಾಡುತ್ತಿದ್ದಾರೆ. ಈ ಹಿಂದೆ ರಸ್ತೆ ಪಕ್ಕದಲ್ಲಿಯೇ ಈ ರೀತಿ ವಿಲೇವಾರಿ ಮಾಡಿದ್ದಾಗ ಪಟ್ಟಣ ಪಂಚಾಯಿತಿ ಸಿಬ್ಬಂದಿ ತೆರವುಗೊಳಿಸಿದ್ದರು.
ಎಲ್ಲೆಂದರಲ್ಲಿ ವಿಲೇವಾರಿ ಮಾಡದಂತೆ ಮಾಂಸದ ವ್ಯಾಪಾರಿಗಳಿಗೆ ಸೂಚಿಸಿದ್ದರೂ ಹಳೇ ಚಾಳಿ ಮುಂದುವರಿಸಿದ್ದರಿಂದ ಪೌರ ಕಾರ್ಮಿಕರಿಗೂ ಬೇಸರ ತರಿಸಿದೆ. ನಗರದ ಸೌಂದರ್ಯ ಹಾಳಾಗುತ್ತಿದೆ. ಪಪಂ ಆಡಳಿತ ಎಲ್ಲೆಂದರಲ್ಲಿ ತ್ಯಾಜ್ಯ ಎಸೆದು ಸಾಂಕ್ರಮಿಕ ರೋಗ ಹರಡುವಿಕೆಗೆ ಕಾರಣರಾದ ಮಾಂಸದಂಗಡಿಗಳ ವ್ಯಾಪಾರಸ್ಥರಿಗೆ ಖಡಕ್ ಎಚ್ಚರಿಕೆ ನೀಡಿ ವೈಜ್ಞಾನಿಕವಾಗಿ ವಿಲೇವಾರಿಗೆ ಕ್ರಮ ವಹಿಸಬೇಕೆಂಬ ಆಗ್ರಹ ವ್ಯಕ್ತವಾಗಿದೆ.
ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ಮಾಂಸದಂಗಡಿಗಳ ವ್ಯಾಪಾರಸ್ಥರಿಗೆ ನೋಟಿಸ್ ನೀಡಲಾಗುವುದು. ನವಲಿ ರಸ್ತೆಯಲ್ಲಿ ಹಾಕಿರುವ ತ್ಯಾಜ್ಯ ತೆರವುಗೊಳಿಸಿ ಸ್ವಚ್ಛತೆಗೆ ಕ್ರಮ ವಹಿಸಲಾಗುವುದು.ಲಕ್ಷ್ಮಣ ಕಟ್ಟಿಮನಿಮುಖ್ಯಾಧಿಕಾರಿ ಪಪಂ ಕನಕಗಿರಿ