

ಕನಕಗಿರಿ: ಮನುಷ್ಯ ನಿಷ್ಕಲ್ಮಶ ಕಾಯಕ ಮಾಡಿದ್ದಲ್ಲಿ ದೇವರನ್ನು ಕಾಣಬಹುದು ಎಂದು ಕೊಪ್ಪಳದ ಹ.ಭ.ಪ. ವಿಠ್ಠಲ ಗುರೂಜೀ ಹೇಳಿದರು.
ಪಟ್ಟಣದ ಶ್ರೀ ಪಾಂಡುರಂಗ ರುಕ್ಮಿಣಿ ದೇವಸ್ಥಾನದ 13ನೇ ವಾರ್ಷಿಕೋತ್ಸವ ಹಾಗೂ ದಿಂಡಿ ಮಹೋತ್ಸವದ ಕೀರ್ತನೆ ಪಾರಾಯಣದಲ್ಲಿ ಶುಕ್ರವಾರ ಮಾತನಾಡಿದರು. ಇತರರಿಗೆ ಕೆಡಕು ಬಯಸದೆ, ಯಾವ ಫಲಾಪೇಕ್ಷೆಯಿಲ್ಲದೆ ಮನುಷ್ಯ ದೇವರನ್ನು ಸ್ಮರಿಸಿದರೆ ಮಾಡುವ ಕಾರ್ಯಗಳೆಲ್ಲವೂ ಸಿದ್ಧಿಯಾಗುತ್ತವೆ. ಜತೆಗೆ ಭಕ್ತಿ, ಶ್ರದ್ಧೆಯಿಂದ ಕೈಗೊಂಡ ಕಾರ್ಯಗಳು ಈಡೇರುವುದರಲ್ಲಿ ಸಂಶಯವಿಲ್ಲ. ನಾವು ಸಾಗುವ ಪಥ ಸರಿಯಾಗಿದ್ದರೆ ನಮ್ಮ ಕಾರ್ಯಗಳು ಕೈಗೂಡಲಿವೆ ಎಂದರು.
ಇದಕ್ಕೂ ಮೊದಲು ಪಾಂಡುರಂಗ ದೇವಸ್ಥಾನದಿಂದ ಐತಿಹಾಸಿಕ ಶ್ರೀ ಕನಕಾಚಲಪತಿ ದೇವಸ್ಥಾನದವರೆಗೆ ಪಲ್ಲಕ್ಕಿ ಮೆರವಣಿಗೆ ನಡೆಯಿತು. ಪಾಂಡುರಂಗ, ರುಕ್ಮಿಣಿ ಭಜನಾ ಪದಗಳಿಗೆ ಭಕ್ತರು ಹೆಜ್ಜೆ ಹಾಕಿದರು. ಮೂರು ದಿನಗಳ ಕಾಲ ನಡೆದ ವಾರ್ಷಿಕೋತ್ಸವ ಅಂಗವಾಗಿ ಭಜನಾ, ಗ್ರಂಥರಾಜ, ಜ್ಞಾನೇಶ್ವರ ಅಧ್ಯಾಯದ ಸಾಮೂಹಿಕ ಪಾರಾಯಣ, ಕಾಕಡರಾತಿ, ಕಾಲಾ ಕೀರ್ತನೆ, ನಗರ ಪ್ರದಕ್ಷಿಣೆ ಜರುಗಿದವು.
ತಹಸೀಲ್ದಾರ್ ವಿಶ್ವನಾಥ ಮುರುಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲುಬಾಗಿಲಮಠ, ಜಿಪಂ ಮಾಜಿ ಸದಸ್ಯರಾದ ವೀರೇಶ ಸಮಗಂಡಿ, ಹನುಮೇಶ ನಾಯಕ, ಸಮಾಜದ ಅಧ್ಯಕ್ಷ ರಮೇಶ ಅಚ್ಚಲಕರ್, ದೇವಸ್ಥಾನ ಟ್ರಸ್ಟ್‌ನ ಅಧ್ಯಕ್ಷ ಸುರೇಶ ಬೊಂದಾಡೆ, ತರುಣ ಸಂಘದ ಅಧ್ಯಕ್ಷ ಶಶಿಧರ ಬೊಂದಾಡೆ, ಹಿರಿಯರಾದ ಅನಂತಪ್ಪ ದಾಯಿಪುಲ್ಲೆ, ಸಂತರಾಮ ಲೋಕ್ರೆ, ಪುಂಡಲೀಕಪ್ಪ ದಾಯಿಪುಲ್ಲೆ, ಅಂಬಾಜಿರಾವ್ ಬೊಂದಾಡೆ, ಅಮರ ಅಚ್ಚಲಕರ್, ಸುರೇಶ ಲೋಕ್ರೆ, ಪ್ರಭಾಕರ ಅಚ್ಚಲಕರ್, ಮೋತಿಲಾಲ್ ಸಂತರು, ಜಂಬುನಾಥ, ಲಕ್ಷ್ಮಣ ಇತರರಿದ್ದರು.