

ಕನಕಗಿರಿ: ಪ್ರಸ್ತುತ ಪಟ್ಟಣದ ಎಕ್ಸೆಲ್ ಶಾಲೆಯಲ್ಲಿ ನಡೆಯುತ್ತಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಗೆ ದಶಕಗಳ ಬಳಿಕ ಸ್ವಂತ ಕಟ್ಟಡ ಭಾಗ್ಯ ಒದಗಿದ್ದು, ಮಕ್ಕಳು ಹಾಗೂ ಶಿಕ್ಷಕರಲ್ಲಿ ಸಂತಸಕ್ಕೆ ಮೂಡಿದೆ.
16.41 ಕೋಟಿ ರೂ. ವೆಚ್ಚದಲ್ಲಿ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಸುಸಜ್ಜಿತ ಕಟ್ಟಡ ನಿರ್ಮಾಣಕ್ಕೆ ನವಲಿ ಗ್ರಾಮದ ಸರ್ವೇ ನಂ. 232/*/*ರ 10 ಎಕರೆ ಒದಗಿಸಲಾಗಿದ್ದು, ಇಲಾಖೆಯಿಂದ ಅನುದಾನ ಮಂಜೂರಾಗಿದೆ.
ಬೆಂಗಳೂರಿನ ಸೃಷ್ಟಿ ಕನ್ಸ್‌ಸ್ಟ್ರಕ್ಷನ್ ನಿರ್ಮಾಣದ ಗುತ್ತಿಗೆ ಪಡೆದಿದೆ. ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಮೇ 24 ರಂದು ಭೂಮಿ ಪೂಜೆ ನೆರವೇರಿಸಲಿದ್ದಾರೆ.
ಶಾಲೆ 2014ರಲ್ಲಿಯೇ ಆರಂಭವಾದರೂ ಸ್ವಂತ ಕಟ್ಟಡವಿಲ್ಲದಿರುವುದು ಸಮಸ್ಯೆಯಾಗಿತ್ತು. ಈ ಶಾಲೆ ಜತೆಗೆ ಹಾಗೂ ನಂತರ ಆರಂಭಗೊಂಡ ಶಾಲೆಗಳು ಸ್ವಂತ ಕಟ್ಟಡ ಕಂಡಿದ್ದವು. ಆದರೆ, ಈ ಶಾಲೆ ಮೊದಲಿಗೆ ನವಲಿಯಲ್ಲಿ ಆರಂಭವಾಗುತ್ತದೆ ಎನ್ನಲಾಗಿತ್ತು.
ನಂತರ ಸಿರಿವಾರದ ಸರ್ವೇ ನಂ. 124/*/*ರಲ್ಲಿ 10 ಎಕರೆ ಜಮೀನು ನಿಗದಿಯಾಗಿತ್ತು. ನಂತರ ಅಲ್ಲಿಂದ ಕನಕಗಿರಿ, ಜೀರಾಳದಲ್ಲಿಯೂ ಸ್ಥಳ ನೋಡಿ, ಕೊನೆಗೆ ನವಲಿಯಲ್ಲಿಯೇ ಶಾಲಾ ಕಟ್ಟಡಕ್ಕೆ ಸ್ಥಳ ಅಂತಿಮಗೊಳಿಸಲಾಗಿದ್ದು, ದಶಕಗಳ ಬಳಿಕ ಕಟ್ಟಡ ಆರಂಭವಾಗಲಿದೆ.
ಕೋಟ್: ಹಿಂದುಳಿದ ವರ್ಗಗಳ ಕಲ್ಯಾಳ ಇಲಾಖೆಯ ಮುರಾರ್ಜಿ ವಸತಿ ಶಾಲೆಯ ಸ್ವಂತ ಕಟ್ಟಡಕ್ಕೆ ಭೂಮಿ ಪೂಜೆ ನೆರವೇರಿಸಲಾಗುತ್ತಿದ್ದು, ಕನಕಗಿರಿಯಲ್ಲಿ ಪ್ರಜಾಸೌಧ ಕಟ್ಟಡಕ್ಕೂ ಭೂಮಿ ಪೂಜೆ ನೆರವೇರಿಸಲಾಗುವುದು. ಸಬ್ ರಿಜಿಸ್ಟ್ರಾರ್, ನ್ಯಾಯಾಲಯವೂ ಸ್ಥಾಪಿಸಲಾಗುವುದು.
ಶಿವರಾಜ ತಂಗಡಗಿ, ಜಿಲ್ಲಾ ಉಸ್ತುವಾರಿ ಸಚಿವ ಕೊಪ್ಪಳ