

ಕನಕಗಿರಿ: ಸರಿಯಾಗಿ ಕರ್ತವ್ಯ ನಿರ್ವಹಿಸದ ತಾಲೂಕಿನ ಚಿಕ್ಕಮಾದಿನಾಳ ಗ್ರಾಪಂನ ಹಿರೇ ಮಾದಿನಾಳ ಕಾಯಕ ಮಿತ್ರ ಅವರನ್ನು ಕೆಲಸದಿಂದ ವಜಾಗೊಳಿಸಬೇಕೆಂದು ಆಗ್ರಹಿಸಿ ನರೇಗಾ ಕೂಲಿ ಕಾರ್ಮಿಕರು ಇಲ್ಲಿನ ತಾಪಂಗೆ ಗುರುವಾರ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ಗ್ರಾಮದ ಎನ್‌ಎಂಆರ್ ಪಡೆದ ಕಾರ್ಮಿಕರಿಗೆ ಮಾತ್ರ ಕೆಲಸ ನೀಡಲಾಗಿದ್ದು, ಕಾಯಕ ಮಿತ್ರ (ಜಿಕೆಎಂ) ಸಮಯಕ್ಕೆ ಸರಿಯಾಗಿ ಕೆಲಸ ಹಾಜರಾಗದೆ ಕೂಲಿ ಕಾರ್ಮಿಕರ ಮೇಲೆ ದರ್ಪ ತೋರುತ್ತಿದ್ದಾರೆ. ಕರ್ತವ್ಯವನ್ನು ಸರಿಯಾಗಿ ನಿರ್ವಹಿಸದೆ ಉದ್ದಟನ ತೋರುತ್ತಿದ್ದು, ಅವರನ್ನು ಕೂಡಲೇ ವಜಾಗೊಳಿಸಬೇಕೆಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ತಾಪಂ ನರೇಗಾ ಸಹಾಯಕಿ ನಿರ್ದೇಶಕಿ ಶರಪೋನ್ನಿಸಾಬೇಗಂ ಸ್ಥಳಕ್ಕೆ ದೌಡಾಯಿಸಿ, ಕಾಯಕ ಮಿತ್ರ ಅವರ ಮೇಲೆ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಕೂಲಿ ಕಾರ್ಮಿಕರಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುವುದೆಂದು ಭರವಸೆ ನೀಡಿದ್ದರಿಂದ ಪ್ರತಿಭಟನೆ ವಾಪಸ್ ಪಡೆಯಲಾಯಿತು.
ಗ್ರಾಪಂ ಮಾಜಿ ಸದಸ್ಯ ಹನುಮೇಶ್ ಬುನ್ನಟ್ಟಿ, ಕೂಲಿ ಕಾರ್ಮಿಕರಾದ ಕನಕಪ್ಪ ದಳಪತಿ, ಈಶಪ್ಪ ಜಿನ್ನಾಪುರ, ಮಾರುತೇಶ ಹೋಟೆಲ್, ಮಹಿಬೂಬಸಾಬ, ಶಂಕ್ರಪ್ಪ, ರಾಮಣ್ಣ ಉಡಮಕಲ್, ಆಶಾಬೀ, ಹುಲಿಗೆಮ್ಮ ಮಲಕನಮರಡಿ, ರತ್ನಮ್ಮ ಬೆಳ್ಳುಳ್ಳಿ, ಅಮರಮ್ಮ ಗೌಡ್ರ ಇತರರಿದ್ದರು.