ಗ್ರಾಮೀಣಮಟ್ಟದಲ್ಲೂ ಮಾಸಿಕ ಸಂತೆ

Kanakagiri Monthly Sante
ಕನಕಗಿರಿಯಲ್ಲಿ ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ ನಡೆದ ಮಾಸಿಕ ಸಂತೆಯನ್ನು ತಾಲೂಕು ಪಂಚಾಯಿತಿ ಇ.ಒ. ರಾಜಶೇಖರ್ ಉದ್ಘಾಟಿಸಿದರು. ಯೋಜನೆ ತಾಲೂಕು ಸಂಯೋಜಕಿ ರೇಣುಕಾ, ತಾಲೂಕು ಪಂಚಾಯಿತಿ ವಿಷಯ ನಿರ್ವಾಹಕ ಯಂಕೋಬ, ಪವನ್ ಇತರರಿದ್ದರು.
Published on

ಕನಕಗಿರಿ: ಎನ್‌ಆರ್‌ಎಲ್‌ಎಂ ಸಂಜೀವಿನಿ ಯೋಜನೆಯಡಿ ಆರ್ಥಿಕ ಸೌಲಭ್ಯ ಪಡೆದಿರುವ ಮಹಿಳಾ ಸ್ವಸಹಾಯ ಗುಂಪುಗಳ ಸದಸ್ಯರು ಮನೆಗಳಲ್ಲೇ ತಯಾರಿಸುವ ವಿವಿಧ ಉತ್ಪನ್ನಗಳಿಗೆ ಮಾರುಕಟ್ಟೆ ದೊರಕಿಸಿ ಅವರನ್ನು ಆರ್ಥಿಕವಾಗಿ ಸಬಲರಾಗಿಸಲು ಮಾಸಿಕ ಸಂತೆ ನಡೆಸಲು ಸರ್ಕಾರ ಸೂಚಿಸಿದೆ ಎಂದು ತಾಪಂ ಇ.ಒ. ಕೆ.ರಾಜಶೇಖರ್ ತಿಳಿಸಿದರು.

ಪಟ್ಟಣದ ಕನಕಾಚಲ ದೇವಸ್ಥಾನ ಆವರಣದಲ್ಲಿ ತಾಪಂನ ಎನ್.ಆರ್.ಎಲ್.ಎಂ. ಸಂಜೀವಿನಿ ಯೋಜನೆಯಡಿ ಆಯೋಜಿಸಿದ್ದ ಸಂಜೀವಿನಿ ಮಾಸಿಕ ಸಂತೆ ಉದ್ಘಾಟಿಸಿ ಸೋಮವಾರ ಮಾತನಾಡಿದರು. ಮುಂದಿನ ದಿನಗಳಲ್ಲಿ ಗ್ರಾಮೀಣ ಮಟ್ಟದಲ್ಲೂ ಸಂತೆ ಆರಂಭಿಸಲಾಗುವುದು. ಅಲ್ಲಿ ಹೆಚ್ಚಿನ ಸಂಘಗಳಿಗೆ ಅವಕಾಶ ಸಿಗಲಿದೆ. ಮಹಿಳೆಯರು ಆರ್ಥಿಕವಾಗಿ ಮುನ್ನಡೆ ಸಾಧಿಸಲು ಬೇಕಾದ ನೆರವನ್ನೂ ನೀಡಲಾಗುವುದು ಎಂದು ತಿಳಿಸಿದರು.

ಸದರಿ ಮಾಸಿಕ ಸಂತೆಯಲ್ಲಿ ಮಹಿಳೆಯರೇ ತಯಾರಿಸಿದ ವಿವಿಧ ಉತ್ಪನ್ನಗಳಾದ ಸಿಹಿ ತಿನಿಸುಗಳು, ಬಟ್ಟೆ, ಬಳೆ, ಖಾರದ ಪುಡಿ, ಕಸೂತಿ, ಕರಕುಶಲ ವಸ್ತುಗಳು ಹಾಗೂ ತೊಗರಿ ಬೇಳೆ ಮಾರಾಟ ನಡೆಯಿತು.

ಎನ್.ಆರ್.ಎಲ್.ಎಂ. ತಾಲೂಕು ಸಂಯೋಜಕಿ ರೇಣುಕಾ, ತಾಪಂ ವಿಷಯ ನಿರ್ವಾಹಕ ಯಂಕೋಬ, ಪವನ್, ಐಇಸಿ ಸಂಯೋಜಕ ಕೆ.ಶಿವಕುಮಾರ್, ಕಂಪ್ಯೂಟರ್ ಆಪರೇಟರ್, ಹುಲಿಗೇಶ್, ಮಂಜು ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net