ಕುಳ್ಳು, ಕಟ್ಟಿಗೆ ಸಂಗ್ರಹಿಸಲು ಶೌಚಗೃಹ ಬಳಕೆ: ನಿರ್ಲೂಟಿ ಗ್ರಾಮದಲ್ಲಿ ತಾಪಂ ಇಒ ಚಂದ್ರಶೇಖರ ಕಂದಕೂರು ಬೇಸರ

16102022 kanakagiri grama vastavya
Published on

ಕನಕಗಿರಿ: ಗ್ರಾಮದ ಸ್ವಚ್ಛತೆ ಹಾಗೂ ಮಹಿಳೆಯರ ಸ್ವಾಭಿಮಾನದ ಸಂಕೇತವಾಗಬೇಕಿದ್ದ ಶೌಚಗೃಹಗಳು ಕುಳ್ಳು, ಕಟ್ಟಿಗೆ ಸಂಗ್ರಹಿಸುತ್ತಿರುವುದು ಬೇಸರದ ಸಂಗತಿ ಎಂದು ತಾಪಂ ಇಒ ಚಂದ್ರಶೇಖರ ಕಂದಕೂರು ಅಸಮಾಧಾನ ವ್ಯಕ್ತಪಡಿಸಿದರು.

ನಿರ್ಲೂಟಿ ಗ್ರಾಮದಲ್ಲಿ ತಾಲೂಕಾಡಳಿತ ಹಮ್ಮಿಕೊಂಡಿದ್ದ ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಸರ್ಕಾರ ಕೋಟಿಗಟ್ಟಲೆ ಹಣ ಖರ್ಚು ಮಾಡಿ ಮನೆಗೊಂದು ಶೌಚಗೃಹ ನಿರ್ಮಿಸಿಕೊಟ್ಟಿದೆ. ಆದರೆ, ಇದನ್ನು ಬಳಕೆ ಮಾಡಿಕೊಂಡು ಅರೋಗ್ಯ ರಕ್ಷಣೆ ಜತೆಗೆ ಗ್ರಾಮದ ಸ್ವಚ್ಛತೆ ಮುಂದಾಗಬೇಕಿರುವ ಫಲಾನುಭವಿಗಳು, ಶೌಚಗೃಹದಲ್ಲಿ ಕುಳ್ಳು, ಕಟ್ಟಿಗೆ ಮತ್ತಿತರ ಸಾಮಗ್ರಿ ಇಡುವ ಕೊಠಡಿ ಮಾಡಿಕೊಂಡಿರುವುದು ಯೋಜನೆಯ ಉದ್ದೇಶವೇ ಬುಡ ಮೇಲಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಇಂದಿಗೂ ಜನ ಬಯಲು ಬಹಿರ್ದೆಸೆಗೆ ಹೋಗುತ್ತಿದ್ದಾರೆ. ಗ್ರಾಮದ ಆರಂಭದಲ್ಲಿ ದುರ್ವಾಸನೆ ಸ್ವಾಗತ್ತಿಸುವೆ ಎಂದು ಬೇಸರ ವ್ಯಕ್ತಪಡಿಸಿದರು.

ಶೌಚಗೃಹ ಬಳಸಿ ಸ್ವಚ್ಛತೆ ಕಾಪಾಡಿ ಎಂದು ತಿಳಿಸಿದರು. ತಹಸೀಲ್ದಾರ್ ಧನಂಜಯ ಮಾಲಗಿತ್ತಿ ಮಾತನಾಡಿ, ಸಾರ್ವಜನಿಕ ಹಾಗೂ ವೈಯಕ್ತಿಕ ಸಮಸ್ಯೆಗಳ ಪರಿಹಾರಕ್ಕೆ ಕಾರ್ಯಕ್ರಮ ಅನುಕೂಲವಾಗಿದೆ. ರಸ್ತೆ ಅಭಿವೃದ್ಧಿ, ಶಾಲಾ ಕೊಠಡಿಗಳ ನಿರ್ಮಾಣ, ಕುಡಿವ ನೀರು ಸೇರಿದಂತೆ ವಿವಿಧ ಸೌಲಭ್ಯ ಈಡೇರಿಸಲು 9 ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ತಿಳಿಸಿದರು. ಬಳಿಕ ಗ್ರಾಮದ ಓಣಿಗಳಲ್ಲಿ ಸುತ್ತಾಡಿ ಸ್ವಚ್ಛತೆ, ಕುಡಿವ ನೀರು ಪೂರೈಕೆ, ಬೋರ್‌ವೆಲ್, ಚರಂಡಿ ಹಾಗೂ ಸ್ಮಶಾನವನ್ನು ಪರಿಶೀಲಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net