

ಕನಕಗಿರಿ: ನರೇಗಾ ಕೆಲಸಕ್ಕೆ ತೆರಳುತ್ತಿದ್ದಾಗ ಕಾಲು ಜಾರಿ ಕಾಲುವೆಗೆ ಬಿದ್ದಿದ್ದ ತಾಲೂಕಿನ ಚಿಕ್ಕಡಂಕನಕಲ್ ಗ್ರಾಪಂ ಬಸವೇಶ್ವರ ಕ್ಯಾಂಪ್‌ನ ಕೂಲಿ ಕಾರ್ಮಿಕನ ಮೃತದೇಹವು ರಾಯಚೂರು ಜಿಲ್ಲೆ ಕಡಬೂರು ಬಳಿ ಸೋಮವಾರ ಪತ್ತೆಯಾಗಿದೆ.
ಹನುಮಂತಪ್ಪ (55) ಮೃತ ಕಾರ್ಮಿಕ. ಈತ ಭಾನುವಾರ ಬೆಳಗ್ಗೆ ತುಂಗಭದ್ರಾ ಎಡದಂಡೆ ನಾಲೆಯಲ್ಲಿ ಬಿದ್ದಿದ್ದು, ಸ್ಥಳೀಯರು ರಕ್ಷಣೆಗೆ ಮುಂದಾದರೂ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದ. ಅಗ್ನಿ ಶಾಮಕ ದಳದವರು ಶೋಧ ನಡೆಸಿದ್ದರೂ ದೊರೆತಿರಲಿಲ್ಲ. ಸೋಮವಾರ ರಾಯಚೂರು ಜಿಲ್ಲೆಯ ಮಸ್ಕಿ ತಾಲೂಕಿನ ಕಡಬೂರು ಬಳಿ ಶವ ತೇಲಿದ್ದರಿಂದ ಪತ್ತೆಯಾಗಿದೆ.
ಸ್ಥಳಕ್ಕೆ ತಾಪಂ ಸಹಾಯಕ ನಿರ್ದೇಶಕಿ ಶರಪೂನ್ನಿಸಾ ಬೇಗಂ, ಗ್ರಾಪಂ ಪಿಡಿಒ ಲಕ್ಷ್ಮಣ, ಉಪಾಧ್ಯಕ್ಷ ರಾಮಚಂದ್ರ ತೆರಳಿದ್ದು, ಕಡಬೂರು ಠಾಣೆಯಲ್ಲಿ ಪ್ರಕರಣ ದಾಖಲಿಸಿ ಮರಣೋತ್ತರ ಪರೀಕ್ಷೆ ನಡೆಸಿ ಸಂಬಂಧಿಕರಿಗೆ ಮೃತದೇಹ ಹಸ್ತಾಂತರಿಸಲು ಕ್ರಮ ವಹಿಸಲಾಗಿದೆ ಎಂದು ಪಿಡಿಒ ಲಕ್ಷ್ಮಣ ತಿಳಿಸಿದ್ದಾರೆ.