ಸಂಭ್ರಮ ಹೆಚ್ಚಿಸಿದ ಬನ್ನಿ ಮುಡಿಯುವ ಕಾರ್ಯಕ್ರಮ

Untitled design(1)
ವಿಜಯದಶಮಿ ನಿಮಿತ್ತ ಕನಕಗಿರಿಯಲ್ಲಿ ಶ್ರೀಕನಕಾಚಲ ಉತ್ಸವದೊಂದಿಗೆ ತೆರಳಿ ಬನ್ನಿಮಂಟಪದ ಬಳಿ ಶಮಿ ವೃಕ್ಷವನ್ನು ಸುತ್ತು ಹಾಕಿದ ಕನಕಾಚಲಪತಿಯ ಉಚ್ಚಾಯ.
Published on

ಕನಕಗಿರಿ: ನಾಡಹಬ್ಬ ದಸರಾವನ್ನು ಪಟ್ಟಣ ಸೇರಿ ತಾಲೂಕಿನ ಜನತೆ ವಿಜಯದಶಮಿ ದಿನವಾದ ಗುರುವಾರ ಬನ್ನಿ ಮುಡಿಯುವ ಮೂಲಕ ಸಡಗರ ಸಂಭ್ರಮದಿಂದ ಆಚರಿಸಿದರು.

ಬನ್ನಿ ಮುಡಿಯುವ ಮುನ್ನ ಪಟ್ಟಣದ ಐತಿಹಾಸಿಕ ಕನಕಾಚಲಪತಿಯ ಅಶ್ವಾರೋಹಣ ಉಚ್ಛಾಯವು ನವಲಿ ರಸ್ತೆಯಲ್ಲಿನ ಬನ್ನಿ ಮರಕ್ಕೆ ತೆರಳಿ ಪೂಜೆ ಸಲ್ಲಿಸಲಾಯಿತು. ದೇಗುಲದ ಪುರಾತನ ಆಯುಧಗಳಿಗೆ ವಿಶಿಷ್ಟ ಪೂಜೆ ನಡೆಯಿತು. ನಂತರ ರಾಜಬೀದಿಯಲ್ಲಿ ಮೆರವಣಿಗೆ ವೈಭವದಿಂದ ನಡೆಯಿತು.

ಸಾವಿರಾರು ಭಕ್ತರು ಕನಕಾಚಲಪತಿ, ಸಂಜೀವಮೂರ್ತಿ, ಮಹಿಷಾಸುರ ಮರ್ಧಿನಿ ದೇವಸ್ಥಾನ, ಪಂಪಾಪತಿ ದೇವಸ್ಥಾನಗಳಿಗೆ ತೆರಳಿ ಬನ್ನಿ ಮುಡಿದರು. ಸಚ್ಚಿದಾನಂದ ಅವಧೂತರ ಮಠದಲ್ಲಿ 9 ದಿನಗಳ ಕಾಲ ನಡೆದ ದೇವಿ ಪುರಾಣದ 18 ಅಧ್ಯಾಯಗಳ ಪಠಣ ನಡೆಯಿತು.

ಐತಿಹಾಸಿಕ ಪ್ರಸಿದ್ಧ ಕನಕಾಚಲಪತಿ ದೇಗುಲದ ಲಕ್ಷ್ಮಿದೇವಿಗೆ, ನಗರೇಶ್ವರ ದೇವಸ್ಥಾನದ ಕನ್ಯಕಾಪರಮೇಶ್ವರಿಗೆ, ಮಹಿಷಾಸುರ ಮರ್ಧಿನಿಗೆ, ಸಚ್ಚಿದಾನಂದ ಮಠದ ಅಂಭಾದೇವಿಗೆ, ಯಲ್ಲಮ್ಮದೇವಿಗೆ, ಗೋರಾಳಕೇರಿ ದುರ್ಗಾ ಪರಮೇಶ್ವರಿ, ಗಂಗಾಪರಮೇಶ್ವರಿ ಸೇರಿ ತಾಲೂಕಿನ ಗ್ರಾಮ ದೇವತೆಗಳಿಗೆ ವಿಶೇಷ ಪೂಜೆ ಸಹಿತ ಪುಷ್ಪಾಲಂಕಾರ ಮಾಡಲಾಗಿತ್ತು.

ಪಲ್ಲಕ್ಕಿ ನಂತರ ಬನ್ನಿ ವಿನಿಮಯ: ರಾಜಬೀದಿಯಲ್ಲಿನ ವೀರಭದ್ರೇಶ್ವರ ದೇವಸ್ಥಾನದ ಪಲ್ಲಕ್ಕಿಯ ನಂತರ ಪರಸ್ಪರ ಬನ್ನಿ ವಿನಿಮಯ ಮಾಡಿಕೊಂಡು ಬಾಳು ಬಂಗಾರವಾಗಲಿ ಎಂದು ಶುಭ ಹಾರೈಸಲಾಯಿತು. ಕೆ.ಕಾಟಾಪೂರದಲ್ಲಿ ನಿತ್ಯ ದಾಸೋಹ: ಸತತ 17  ವರ್ಷಗಳಿಂದ ತಾಲೂಕಿನ ಕೆ.ಕಾಟಾಪೂರದಲ್ಲಿ ನಡೆಯುತ್ತಿರುವ ಶ್ರೀದೇವಿ ಮಹಾತ್ಮೆ ಪುರಾಣದಲ್ಲಿ ಒಂಬತ್ತು ದಿನಗಳ ಕಾಲ ನಿತ್ಯ ದಾಸೋಹ ನಡೆಯಿತು. ಗದುಗಿನ ಬೆಟ್ಟದಯ್ಯ ಶಾಸ್ತ್ರಿ ಹಾಗೂ ಗುರುಸಿದ್ದಯ್ಯ ಸವಡಿಮಠ ಪ್ರವಚನ ಮಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net