ಕಾಂಗ್ರೆಸ್‌ನಲ್ಲಿ ಹಿರಿತನಕ್ಕೆ ಬೆಲೆಯಿಲ್ಲ; ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೇಳಿಕೆ

03042021 Kanakagiri pratapgowda patil visit
Published on

ಕನಕಗಿರಿ: ರಾಜಕಾರಣದಲ್ಲಿ ಪಕ್ಷಾಂತರ ಸಹಜ. ಸಮ್ಮಿಶ್ರ ಸರ್ಕಾರದಲ್ಲಿ ನನ್ನ ಕ್ಷೇತ್ರಕ್ಕೆ ಅನುದಾನ ನೀಡಲಿಲ್ಲ. ಕಾಂಗ್ರೆಸ್‌ನಲ್ಲಿ ಹಿರಿತನಕ್ಕೆ ಬೆಲೆಯೂ ಇಲ್ಲವಾಗಿದ್ದರಿಂದ ಪಕ್ಷಾಂತರ ಮಾಡಬೇಕಾಯಿತು ಎಂದು ಮಸ್ಕಿ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ್ ಹೇಳಿದರು.

ಶನಿವಾರ ಪಟ್ಟಣದಲ್ಲಿ ನಡೆದ ಗರುಡೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. 2008ರಲ್ಲಿ ಗರುಡೋತ್ಸವ ಮುಗಿಸಿ ಹೊರಬಂದಾಗ ನನಗೆ ಬಿಜೆಪಿ ಟಿಕೆಟ್ ಸಿಕ್ಕಿತ್ತು. ನನ್ನ ರಾಜಕೀಯ ಬೆಳವಣಿಗೆಗೆ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಆಶೀರ್ವಾದ ಕಾರಣ. ರಮೇಶ್ ಜಾರಕಿಹೊಳಿ ಪ್ರಚಾರಕ್ಕೆ ಬರುವ ಬಗ್ಗೆ ನಿರೀಕ್ಷೆಯಿತ್ತು. ಈಗ ಅನುಮಾನವಿದೆ. ಈಗಾಗಲೇ ಸಚಿವ ಬಿ.ಶ್ರೀರಾಮುಲು, ಬಿಜೆಪಿ ರಾಜ್ಯ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಚಾರ ಆರಂಭಿಸಿದ್ದಾರೆ ಎಂದರು.

ಕೆ.ವಿರೂಪಾಕ್ಷನವರು ಕಲ್ಯಾಣ ಕರ್ನಾಟಕದ ಹಾಲುಮತ ಸಮುದಾಯದ ದೊಡ್ಡ ನಾಯಕರು. ಅವರೂ ಬಿಜೆಪಿ ಸೇರಿದ್ದರಿಂದ ಪಕ್ಷಕ್ಕೆ ಬಲ ಬಂದಿದೆ. ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯೆ ನೀಡುವುದಿಲ್ಲ, ಸಿಎಂ ವಿರುದ್ಧ ಈಶ್ವರಪ್ಪ ದೂರು ನೀಡಿದ್ದು ಪಕ್ಷದ ಆಂತರಿಕ ವಿಚಾರ ಎಂದರು.

ಶಾಸಕ ಬಸವರಾಜ ದಢೇಸುಗೂರು ಮಾತನಾಡಿ, ವಿಜಯೇಂದ್ರರ ಭವಿಷ್ಯ ಚೆನ್ನಾಗಿದೆ. ಅವರು ಹೋದ ಕಡೆಗೆ ಪಕ್ಷ ಗೆಲ್ಲುತ್ತದೆ. 2023ರವರೆಗೆ ಯಡಿಯೂರಪ್ಪನವರೇ ಸಿಎಂ ಆಗಿ ಮುಂದುವರಿಯಲಿದ್ದಾರೆ ಎಂದು ತಿಳಿಸಿದರು.

ಬಿಜೆಪಿ ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಸಣ್ಣ ಕನಕಪ್ಪ, ಮಂಡಲ ಅಧ್ಯಕ್ಷ ಮಹಾಂತೇಶ ಸಜ್ಜನ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net