

ಕನಕಗಿರಿ: ತಾಲೂಕಿನ ಮುಸಲಾಪುರ ಗ್ರಾಮದಲ್ಲಿ ಹಾದು ಹೋಗಿರುವ ಕನಕಗಿರಿ-ಕೊಪ್ಪಳ ರಸ್ತೆ, ಚರಂಡಿ ಒತ್ತುವರಿ ಮಾಡಿಕೊಂಡಿದ್ದ ಗೂಡಂಗಡಿಗಳ ತೆರವು ಕಾರ್ಯಾಚರಣೆ ಕಳೆದ ಮೂರ್ನಾಲ್ಕು ದಿನಗಳಿಂದ ನಡೆದಿದೆ.
ಕನಕಗಿರಿ ಹೊರೆತುಪಡಿಸಿದರೆ ಅತೀ ಹೆಚ್ಚು ವ್ಯಾಪಾರ ವಹಿವಾಟು ನಡೆಯುವ ಗ್ರಾಮಗಳಲ್ಲಿ ಒಂದಾದ ಮುಸಲಾಪುರ, ಸುತ್ತ ಮುತ್ತಲಿನ ಹತ್ತಾರು ಹಳ್ಳಿಗಳಿಗೆ ಕೇಂದ್ರ ಸ್ಥಾನವಾಗಿದೆ. ಇದರಿಂದ ಜನದಟ್ಟಣೆಯಿಂದ ಕೂಡಿರುತ್ತದೆ. ಕನಕಗಿರಿ-ಕೊಪ್ಪಳ, ಯಲಬುರ್ಗಾ- ಗಂಗಾವತಿ, ಕುಷ್ಟಗಿ-ಗಂಗಾವತಿ ಸೇರಿ ಇತರೆಡೆಗೆ ಸಾಗುವ ಬಸ್ಸುಗಳಿಗೆ ಮುಸಲಾಪುರ ಜಂಕ್ಷನ್ ಆಗಿ ಪರಿವರ್ತನೆ ಗೊಂಡಿದೆ. ಇಲ್ಲಿ ಹೋಟೆಲ್‌ಗಳ ಸಂಖ್ಯೆಯೂ ಹೆಚ್ಚಾಗಿದೆ.
ಗ್ರಾಮದ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಈ ಮೊದಲಿದ್ದ ಚರಂಡಿ ದಾಟಿ ರಸ್ತೆ ಒತ್ತುವರಿ ಮಾಡಿಕೊಂಡು ವ್ಯಾಪಾರಿಗಳು ಅಂಗಡಿಗಳನ್ನು ನಡೆಸುತ್ತಿದ್ದರು. ಇದರಿಂದ ಕೊಳಚೆ ನೀರು ಹರಿಯಲು ತೊಂದರೆಯಾಗಿ ರಸ್ತೆಯಲ್ಲಿ ನಿಂತು ಕೆಸರುಮಯವಾಗಿರುತ್ತಿತ್ತು. ವಾಹನ ಸವಾರರಿಗೆ ಗ್ರಾಮವನ್ನು ದಾಟುವಷ್ಟರಲ್ಲೇ ಸಾಕಾಗುತ್ತಿತ್ತು. ಅಲ್ಲದೇ, ಒತ್ತುವರಿಯಿಂದ ಸಂಚಾರ ಸಿಕ್ಕು ಉಂಟಾಗುತ್ತಿತ್ತು. ಈ ಹಿನ್ನೆಲೆಯಲ್ಲಿ ಸೆ. 29ಕ್ಕೆ ಸಭೆ ನಡೆಸಿ ತೆರವಿಗೆ ಒಪ್ಪಿಗೆ ಪಡೆಯಲಾಗಿದೆ. ಅದರಂತೆ ಕಳೆದ ಮೂರ್ನಾಲ್ಕು ದಿನಗಳಿಂದ ತೆರವು ಕಾರ್ಯ ಆರಂಭಗೊಂಡಿದೆ. ಕೆಲವರು ಸ್ವಯಂ ತೆರವಿಗೆ ಮುಂದಾಗಿದ್ದಾರೆ. ಇನ್ನಷ್ಟು ವ್ಯಾಪಾರಸ್ಥರಿಂದ ಆಗಿರುವ ಒತ್ತುವರಿ ತೆರವು ಮಾಡಬೇಕಾಗಿದೆ. ತೆರವಾದ ಸ್ಥಳದಲ್ಲಿ ಮುಚ್ಚಿಹೋಗಿದ್ದ ಚರಂಡಿ ಬಯಲಿಗೆ ಬಂದಿದ್ದು, ಜೆಸಿಬಿಯಿಂದ ಸ್ವಚ್ಛ ಮಾಡುವ ಕೆಲಸ ಗ್ರಾಪಂನಿಂದ ನಡೆಯುತ್ತಿದೆ. ಸಾರ್ವಜನಿಕರ ಜತೆಗೆ ವಾಹನ ಸವಾರರಿಗೂ ಅನುಕೂಲವಾಗಲಿದೆ.
ಸಂಘಟನೆಗಳ ಆಗ್ರಹದ ಹಿನ್ನೆಲೆಯಲ್ಲಿ ಒತ್ತುವರಿ ಮಾಡಿದ್ದವರಿಗೆ ನೋಟಿಸ್ ನೀಡಲಾಗಿತ್ತು. ಆದರೆ, ಕೆಲವರು ಅಕ್ಷೇಪಿಸಿದ್ದರಿಂದ ಸ್ಥಗಿತಗೊಳಿಸಿ ಅಧಿಕಾರಿಗಳ ಸಮ್ಮುಖದಲ್ಲಿ ಗ್ರಾಮಸ್ಥರ ಸಭೆ ನಡೆಸಿ ಒಪ್ಪಿಗೆ ಪಡೆದು ತೆರವಿಗೆ ಮುಂದಾಗಲಾಗಿದೆ. ರಸ್ತೆಯನ್ನೂ ತಾತ್ಕಾಲಿಕವಾಗಿ ದುರಸ್ಥಿಗೊಳಿಸಲಾಗುವುದು. ಸಂಬಂಧಿಸಿದ ಇಲಾಖೆಯೂ ರಸ್ತೆ ಅಭಿವೃದ್ಧಿ ಮಾಡಲಿದೆ. | ನಾಗೇಶ್ ಪಿಡಿಒ ಗ್ರಾಪಂ ಮುಸಲಾಪುರ