ತಿಪ್ಪನಾಳ ಕೆರೆ ನಿರ್ವಹಣೆಗೆ ಅಸಡ್ಡೆ, ಕಿತ್ತುಹೋದ ಒಡ್ಡು- ಹಾಸು ಬಂಡೆಗಳು ಪಾಚಿಬೆಳೆದು ಕಲುಷಿತಗೊಂಡ ನೀರು

drinking water scheme lake
ತಿಪ್ಪನಾಳ ಬಳಿಯ ಕೆರೆಯಲ್ಲಿ ಕಿತ್ತಿರುವ ಒಡ್ಡು-ಹಾಸುಬಂಡೆಗಳು.
Published on

ಕನಕಗಿರಿ: ಪಟ್ಟಣ ಸೇರಿ ತಾಲೂಕಿನ 9 ಗ್ರಾಮಗಳಿಗೆ ಕುಡಿವ ನೀರು ಒದಗಿಸಲು ತಾಲೂಕಿನ ತಿಪ್ಪನಾಳ ಬಳಿ ನಿರ್ಮಿಸಲಾಗಿರುವ ಬಹುಗ್ರಾಮ ಕುಡಿವ ನೀರಿನ ಯೋಜನೆಯ ಕೆರೆ ನಿರ್ವಹಣೆಯಿಲ್ಲದೆ ಹಾಳಾಗುತ್ತಿದೆ.

ಕನಕಗಿರಿ ಸೇರಿ ನಾನಾ ಹಳ್ಳಿಗಳಿಗೆ ಕುಡಿವ ನೀರು ಒದಗಿಸಲು ತಾಲೂಕಿನ ತಿಪ್ಪನಾಳ ಬಳಿ ಕೆರೆ ನಿರ್ಮಿಸಿ ಅಲ್ಲಿಗೆ ತುಂಗಭದ್ರಾ ಎಡದಂಡೆ ಕಾಲುವೆಯಿಂದ ನೀರು ತುಂಬಿಸಲು ಯೋಜನೆಯನ್ನು ಜಾರಿಗೆ ತರಲಾಗಿತ್ತು. ಈ ಕೆರೆಯಲ್ಲಿ ಸಂಗ್ರಹವಾದ ನೀರನ್ನು ಶುದ್ಧೀಕರಣಗೊಳಿಸಿ ಕನಕಗಿರಿ ಸೇರಿ ಹಲವು ಗ್ರಾಮಗಳಿಗೆ ನೀರು ಸರಬರಾಜು ಮಾಡಲು ಅಲ್ಲಲ್ಲಿ ಸಂಪುಗಳನ್ನು ನಿರ್ಮಾಣ ಮಾಡಲಾಗಿತ್ತು. ಅಲ್ಲಿಂದ ಗ್ರಾಮಗಳಿಗೆ ನೀರು ಸರಬರಾಜು ಮಾಡುವುದು ಈ ಯೋಜನೆಯ ಉದ್ದೇಶವಾಗಿತ್ತು.

ಗ್ರಾಮೀಣ ಕುಡಿವ ನೀರು ಹಾಗೂ ನೈರ್ಮಲ್ಯ ವಿಭಾಗದಿಂದ ನಿರ್ವಹಣೆಗೊಳಪಡುವ ಈ ಯೋಜನೆಯನ್ನು ಕಾರಟಗಿ ಮೂಲದವರು ನಿರ್ವಹಣೆಯ ಗುತ್ತಿಗೆ ಪಡೆದುಕೊಂಡಿದ್ದಾರೆ.

ಸಮರ್ಪಕವಾಗಿ ನಿರ್ವಹಣೆ ಮಾಡದಿದ್ದರಿಂದ ಕೆರೆಯ ಒಡ್ಡು ಕಿತ್ತು ಹೋಗಿದ್ದು, ಒಡ್ಡಿಗೆ ಹಾಸಲಾಗಿದ್ದ ಬಂಡೆಗಳು ಕಿತ್ತು ನೀರುಪಾಲಾಗಿವೆ. ಇನ್ನು ಕೆರೆಯ ನೀರಿನಲ್ಲಿ ಪಾಚಿ ಬೆಳೆದು ನಿಂತಿದ್ದು, ಸ್ವಚ್ಛತೆ ಎನ್ನುವುದು ಕೆರೆಯಲ್ಲಿ ಮಾಯವಾಗಿದೆ.

ಈ ರೀತಿಯಾಗಿ 6 ತಿಂಗಳು ಕಳೆದರೂ ಸಹ ನಿರ್ವಹಣೆ ಗುತ್ತಿಗೆ ಪಡೆದವರು ಮಾತ್ರ ದುರಸ್ಥಿ ಹಾಗೂ ಸ್ವಚ್ಛತೆಗೆ ಮುಂದಾಗದಿರುವುದು ಅನುಮಾನಗಳಿಗೆ ಕಾರಣವಾಗಿದೆ.

ಒಡ್ಡು ಸರಿಪಡಿಸಲಿ: ಈಗಾಗಲೇ ತುಂಗಭದ್ರಾ ಜಲಾಶಯದಲ್ಲಿ ನೀರು ಭರ್ತಿಯಾಗಿದ್ದು, ಕಾಲುವೆಗಳಿಗೆ ನೀರು ಹರಿಸಲಾಗುತ್ತಿದೆ. ಕಾಲುವೆಗೆ ನೀರು ಹರಿದರೆ ಈ ಕೆರೆಗೆ ನೀರು ಸರಬರಾಜು ಮಾಡಲಾಗುತ್ತದೆ. ಆದರೆ, ನಿರ್ವಹಣೆ ಕೊರತೆಯಿಂದ ಕೆರೆಯ ಒಡ್ಡು ಒಡೆದು ಬಂಡೆಗಳು ಕೆರೆಯ ತಳ ಸೇರಿವೆ. ಕೆರೆಗೆ ನೀರು ಸಂಗ್ರಹಿಸಲು ಮುಂದಾಗಲಾಗುತ್ತ್ತಿದೆ. ನೀರು ಸಂಗ್ರಹವಾದರೆ, ಹಾನಿಯಾಗುವ ಸಂಭವವಿದೆ. ಸಂಬಂಧಿಸಿದ ಇಲಾಖೆ, ಕೆರೆಯ ಒಡ್ಡನ್ನು ಸರಿಪಡಿಸಿ ನೀರು ತುಂಬಿಸಲು ಮುಂದಾಗಬೇಕೆನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

24 ದಿನ ಸರಬರಾಜಾಗದ ಜಲ: ಕೆರೆ ನಿರ್ವಹಣೆ ಹಾಗೂ ನೀರು ಸರಬರಾಜಿನ ಗುತ್ತಿಗೆ ಪಡೆದ ಗುತ್ತಿಗೆದಾರರಿಗೆ ಇಲಾಖೆಯಿಂದ ನಿರ್ವಹಣೆಯ ಬಿಲ್ ಮಂಜೂರಾಗಿಲ್ಲ ಎನ್ನಲಾಗಿದೆ. ಇದರಿಂದ ದುಡಿಯುವ ಕಾರ್ಮಿಕರಿಗೆ ಹಲವು ತಿಂಗಳ ವೇತನವನ್ನೂ ಗುತ್ತಿಗೆದಾರರು ನೀಡಿಲ್ಲ. ಇದರಿಂದ ಜೂ.10ರಿಂದ ಕಾರ್ಮಿಕರು ಕೆಲಸ ಕೈ ಬಿಟ್ಟಿದ್ದು, ಪಟ್ಟಣ ಸೇರಿದ್ದರಿಂದ ನಾನಾ ಗ್ರಾಮಗಳಲ್ಲಿ ನೀರಿನ ಅಭಾವ ತಲೆದೂರಿತ್ತು. ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಸಿಬ್ಬಂದಿ ಮನವೊಲಿಸಿದ್ದರಿಂದ ಜು.3ರಿಂದ ನೀರು ಸರಬರಾಜು ಆರಂಭಗೊಂಡಿದೆ.

ಈ ಕೆರೆಯ ಮುಂಭಾಗದಲ್ಲಿ ಕೆಲಸಗಾರರಿಗೆ ನಿರ್ಮಿಸಲಾದ ವಸತಿ ಗೃಹಗಳಿಗೆ ಕಿಟಕಿಯನ್ನು ಮುಚ್ಚಲು ವ್ಯವಸ್ಥೆಯಿಲ್ಲವಾಗಿದ್ದು, ಗುತ್ತಿಗೆದಾರರು ಕಾಟಾಚಾರಕ್ಕೆ ಕಾಮಗಾರಿಯನ್ನು ಪೂರ್ಣಗೊಳಿಸಿ ತೆರಳಿದ್ದು, ಸಿಬ್ಬಂದಿ ವಾಸಿಸಲಿಕ್ಕೆ ಹಿಂಜರಿಯುತ್ತಿದ್ದಾರೆ.

ತಮಗೆ ಬಿಲ್ ಪಾವತಿಯಾಗಿಲ್ಲ ಎಂದು ಗುತ್ತಿಗೆದಾರರು ಕಾರ್ಮಿಕರಿಗೆ ವೇತನ ನೀಡಿಲ್ಲ. ಇದರಿಂದ ನೀರು ಸರಬರಾಜು ಮಾಡುವುದನ್ನು ಕಾರ್ಮಿಕರು ನಿಲ್ಲಿಸಿದ್ದರು. ಕಾರ್ಮಿಕರ ಮನವೊಲಿಸಿ ನೀರು ಸರಬರಾಜು ಮಾಡಲು ಕ್ರಮ ವಹಿಸಲಾಗಿದೆ. ಕೆರೆಯಲ್ಲಿನ ಪಾಚಿ ಸ್ವಚ್ಛತೆ ಹಾಗೂ ಒಡೆದಿರುವ ಒಡ್ಡನ್ನು ಸರಿಪಡಿಸಲಾಗುವುದು. ಸಿಬ್ಬಂದಿಗಾಗಿ ನಿರ್ಮಿಸಿರುವ ಮನೆಗಳ ಕಿಟಕಿಗಳಿಗೆ ಮುಚ್ಚುವ ವ್ಯವಸ್ಥೆ ಕಲ್ಪಿಸಲು ಕ್ರಮ ವಹಿಸಲಾಗುವುದು.

ದೇವಣ್ಣ ಕಟ್ಟಿ

ಎಇಇ ಗ್ರಾಕುನೀನೈ ವಿಭಾಗ ಗಂಗಾವತಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net