ಮೊಹರಂ ಹಬ್ಬ ಆಚರಣೆಯಲ್ಲಿ ಶಾಂತಿ-ಬಂಧುತ್ವ ಕಾಣಲಿ

Kanakagiri Moharam shanti sabhe
ಮೊಹರಂ ನಿಮಿತ್ತ ಹುಲಿಹೈದರ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಾಂತಿಸಭೆಯಲ್ಲಿ ತಹಸೀಲ್ದಾರ್ ವಿಶ್ವನಾಥ ಮುರುಡಿ ಮಾತನಾಡಿದರು. ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರ್, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ ಇತರರಿದ್ದರು.
Published on

ಕನಕಗಿರಿ: ಶಾಂತಿ, ಕಾನೂನು ವ್ಯವಸ್ಥೆಗೆ ಧಕ್ಕೆ ಬಾರದ ರೀತಿಯಲ್ಲಿ ಮೊಹರಂ ಆಚರಿಸಿ ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.

ತಾಲೂಕಿನ ಸೂಕ್ಷ್ಮ ಗ್ರಾಮ ಹುಲಿಹೈದರದಲ್ಲಿ ಶುಕ್ರವಾರ ಮೊಹರಂ ಹಬ್ಬದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗ್ರಾಮದಲ್ಲಿ ಎಲ್ಲ ವರ್ಗದ ಜನಾಂದವರು ಕೂಡಿಕೊಂಡು ಮೊಹರಂ ಆಚರಿಸಬೇಕು. ಹಬ್ಬ ಬಂಧುತ್ವ ಬೆಸೆಯುವಂತಾಗಲಿ. ಹೀಗಾಗಿ ತಾಲೂಕು ಆಡಳಿತ ಗ್ರಾಮದಲ್ಲಿ ಸರಳ ಮೊಹರಂ ಆಚರಣೆಗೆ ಅವಕಾಶ ನೀಡಿದೆ. ಇದಕ್ಕೆ ಗ್ರಾಮಸ್ಥರು ಸಹಕರಿಸಲಿ. ಶಾಂತಿಯುತ ಮತ್ತು ಸರಳ ಹಬ್ಬ ಆಚರಣೆ ಮಾಡಿ ಗ್ರಾಮದ ಘನತೆ ಎತ್ತಿ ಹಿಡಿಯಬೇಕು ಎಂದರು.

ಪಿಐ ಎಂ.ಡಿ ಫೈಜುಲ್ಲಾ ಮಾತನಾಡಿ, ಮೊಹರಂ ಆಚರಣೆ ಸಂದರ್ಭದಲ್ಲಿ ಮಾರಕಾಸ್ತ್ರಗಳ ಪ್ರದರ್ಶನಕ್ಕೆ ಅವಕಾಶವಿಲ್ಲ. ಕಬ್ಬಿಣದ ರಾಡು ಹಿಡಿದು ಕುಣಿಯುವುದಾಗಲಿ, ದೊಂಬಿ ಎಬ್ಬಿಸುವುದಾಗಲಿ ಮಾಡುವುದು ಕಂಡು ಬಂದರೆ ಅಂತವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು. ಮೊಹರಂನಲ್ಲಿ ತಾಷಾ, ಗೆಜ್ಜೆ ಕುಣಿತ ಮತ್ತಿತರ ಕಲಾತಂಡಗಳಿಂದ ಸಂಭ್ರಮಿಸಿ ಎಂದು ತಿಳಿಸಿದರು.

ತಾಪಂ ಇಒ ರಾಜಶೇಖರ, ಗ್ರಾಪಂ ಅಧ್ಯಕ್ಷೆ ಶರಣಮ್ಮ ಕೆಲ್ಲೂರ್, ಉಪಾಧ್ಯಕ್ಷ ಜಗದೀಶಪ್ಪ ಗದ್ದಿ, ಜಿಪಂ ಮಾಜಿ ಸದಸ್ಯ ಹನುಮೇಶ ನಾಯಕ, ಪ್ರಮುಖರಾದ ಹನುಮೇಶ ನಾಮಸೇವೆ, ಜಿಲಾನಸಾಬ, ರಾಜಸಾಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net