ರಾಮನ ಜಪಕ್ಕೆ ಜನರಿಂದ ತಕ್ಕ ಉತ್ತರ

BIRTHDAY
ಕನಕಗಿರಿ ಅಲ್ಪಸಂಖ್ಯಾತರ ಇಲಾಖೆ ಮೌಲಾನ ಆಜಾದ್ ಶಾಲೆಯಲ್ಲಿ ಮಕ್ಕಳೊಂದಿಗೆ ಸಚಿವ ಶಿವರಾಜ ತಂಗಡಗಿ ಕೇಕ್ ಕತ್ತರಿಸಿ ಹುಟ್ಟು ಹಬ್ಬ ಆಚರಿಸಿಕೊಂಡರು. ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ, ವಕ್ತಾರ ಶರಣಪ್ಪ ಭತ್ತದ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ತಹಸೀಲ್ದಾರ್ ವಿಶ್ವನಾಥ ಮುರುಡಿ ಇತರರಿದ್ದರು.
Published on

ಕನಕಗಿರಿ: ರಾಮನ ಹೆಸರಿನಲ್ಲಿ ಮತ ಕೇಳಿದ ಬಿಜೆಪಿಗರು ರಾಮನ ಬಂಟ ಹನುಮನ ನಾಡಲ್ಲಿ ಸೋಲು ಕಂಡಿರುವುದು ಧರ್ಮಕ್ಕೆ ಸಿಕ್ಕ ಜಯ ಎಂದು ಕನ್ನಡ ಮತ್ತು ಸಂಸ್ಕೃತಿ, ಹಿಂದುಳಿದ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

53ನೇ ಹುಟ್ಟು ಹಬ್ಬ ನಿಮಿತ್ತ ಕನಕಾಚಲಪತಿ ದೇವಸ್ಥಾನಕ್ಕೆ ಆಗಮಿಸಿ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದರು.

ಬಿಜೆಪಿಗರು ಚುನಾವಣೆಯಲ್ಲಿ ಎನ್‌ಡಿಎ 400 ದಾಟುತ್ತೆ, ಬಿಜೆಪಿ 370 ಸ್ಥಾನ ಪಡೆಯಲಿದೆ ಎಂದು ಹೇಳಿಕೊಳ್ಳುತ್ತಿದ್ದರು. ಆದರೆ, ಸ್ವತಂತ್ರವಾಗಿ ಸರ್ಕಾರ ನಡೆಸಲಿಕ್ಕೂ ಆಗದಷ್ಟು ಸ್ಥಾನಗಳನ್ನು ಪಡೆದಿದ್ದಾರೆ. ರಾಮ, ಹನುಮನ ಹೆಸರು ಬಳಸಿ ಮತಗಿಟ್ಟಿಸಿಕೊಳ್ಳಲು ಪ್ರಯತ್ನಿಸಿದವರಿಗೆ ಜನ ತಕ್ಕ ಉತ್ತರ ನೀಡಿದ್ದಾರೆ ಎಂದು ಟೀಕಿಸಿದರು.

ಸಾಮಾಜಿಕ ನ್ಯಾಯದ ಪರಿಕಲ್ಪನೆ ಇರುವ ಪಕ್ಷಗಳು ಬೆಂಬಲಿಸಿದ್ದರಿಂದ ಬಿಜೆಪಿ ಅಧಿಕಾರಕ್ಕೆ ಬಂದಿದ್ದು, ಮೋದಿ ಈ ಹಿಂದೆ ನೀಡಿದ ಆಡಳಿತವನ್ನು ಈ ಬಾರಿ ಮಾಡಲು ಸಾಧ್ಯವಿಲ್ಲ. ಸಂವಿಧಾನ ಬದಲಾವಣೆ ಮಾತು ಈಗ ಮಾತನಾಡುವುದಿಲ್ಲ. ಸರ್ವಾಧಿಕಾರ ಆಡಳಿತ ಈ ಬಾರಿ ಇರುವುದಿಲ್ಲ. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದಂತೆ ಎನ್‌ಡಿಎ ಸರ್ಕಾರ ಕೆಲವೇ ತಿಂಗಳಲ್ಲಿ ಪತನವಾಗಲಿದೆ ಎಂದು ಭವಿಷ್ಯ ನುಡಿದರು.

ಕಾಂಗ್ರೆಸ್ ಇದೀಗ ಪುಟಿದೆದ್ದು ನಿಂತಿದೆ. ರಾಹುಲ್‌ಗೆ ಪಪ್ಪು ಎನ್ನುತ್ತಿದ್ದವರ ಓಟಕ್ಕೆ ಅದೇ ರಾಹುಲ್ ಗಾಂಧಿ ಕಡಿವಾಣ ಹಾಕಿದ್ದಾರೆ. ಈ ಬಾರಿ ಲೋಕಸಭೆಯಲ್ಲಿ ಪ್ರಭಲ ವಿರೋಧ ಪಕ್ಷವಿದೆ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ವೀರೇಶ ಸಮಗಂಡಿ, ಬ್ಲಾಕ್ ಅಧ್ಯಕ್ಷ ಗಂಗಾಧರಸ್ವಾಮಿ, ವಕ್ತಾರ ಶರಣಪ್ಪ ಭತ್ತದ, ತಾಪಂ ಮಾಜಿ ಅಧ್ಯಕ್ಷ ಬಸವಂತಗೌಡ, ಪ್ರಚಾರ ಸಮಿತಿ ಅಧ್ಯಕ್ಷ ರಮೇಶ ನಾಯಕ, ಪಪಂ ಸದಸ್ಯರಾದ ಸಂಗಪ್ಪ ಸಜ್ಜನ, ಶರಣೇಗೌಡ, ಪ್ರಮುಖರಾದ ಹುಲುಗಪ್ಪ ವಾಲೇಕಾರ, ರವಿ ಪಾಟೀಲ್, ಹೊನ್ನೂರುಸಾಬ ಉಪ್ಪು, ಪ್ರಶಾಂತ ತೆಗ್ಗಿನಮನಿ, ಗಂಗಾಧರ ಚೌಡ್ಕಿ, ಖಾಜಸಾಬ ಗುರಿಕಾರ ಇದ್ದರು.

ಹೆಚ್ಚಿನ ಜವಾಬ್ದಾರಿ ಕೊಟ್ಟರೆ ನಿಭಾಯಿಸುವೆ

ಎಸ್‌ಟಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ ಆರೋಪದಲ್ಲಿ ನಾಗೇಂದ್ರ ಅವರು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಹಗರಣ ಕುರಿತು ತನಿಖೆ ನಡೆಯುತ್ತಿದೆ. ತಪ್ಪಿತಸ್ಥರು ಯಾರೇ ಇರಲಿ ಅವರಿಗೆ ಶಿಕ್ಷೆಯಾಗಬೇಕು. ಮುಖ್ಯಮಂತ್ರಿ ಪಪಂ ಅಭಿವೃದ್ಧಿ ಖಾತೆ ಜವಾಬ್ದಾರಿ ನೀಡಿದರೆ ಸಮರ್ಥವಾಗಿ ನಿಭಾಯಿಸುವೆ ಎಂದರು.

ಗ್ಯಾರಂಟಿಗಳು ಮುಂದುವರಿಯಲಿವೆ

ಗ್ಯಾರಂಟಿ ಯೋಜನೆಗಳಿಂದ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 16ಕಡೆ ಗೆಲ್ಲುವ ಗುರಿ ಹೊಂದಿತ್ತು. ಅದು ಆಗಿಲ್ಲ. ಕಲ್ಯಾಣ ಕರ್ನಾಟಕ ಭಾಗದಲ್ಲಿ 5ಕಡೆ ಕಾಂಗ್ರೆಸ್ ಗೆದ್ದಿದೆ. ಗ್ಯಾರಂಟಿ ಯೋಜನೆಯಿಂದ ಬಡವರು ಬದುಕುತ್ತಿದ್ದಾರೆ. ಆದರೆ, ಯೋಜನೆ ನಿಲ್ಲಿಸುವ ಬಗ್ಗೆ ಕೆಲ ಶಾಸಕ, ಸಚಿವರು ಮಾತನಾಡಿದ್ದಾರೆ. ಅದು ಅವರ ವೈಯಕ್ತಿಕ ಅಭಿಪ್ರಾಯ. ಗ್ಯಾರಂಟಿಗಳನ್ನು ನಿಲ್ಲಿಸುವುದಿಲ್ಲ ಎಂದು ಸಿಎಂ, ಡಿಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net