

ಕನಕಗಿರಿ: ನವಲಿಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮುರಾರ್ಜಿ ದೇಸಾಯಿ ವಸತಿ ಶಾಲೆಯ ಕಟ್ಟಡ ನಿರ್ಮಿಸಲು 22 ಕೋಟಿ ರೂ. ಅನುದಾನ ಮಂಜೂರು ಮಾಡಲಾಗಿದೆ ಎಂದು ಸಚಿವ ಶಿವರಾಜ ತಂಗಡಗಿ ಹೇಳಿದರು.
ತಾಲೂಕಿನ ನವಲಿ ಗ್ರಾಪಂ ವ್ಯಾಪ್ತಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಅಭಯಹಸ್ತ ಕಾರ್ಯಕ್ರಮದಲ್ಲಿ ಮಾತನಾಡಿದರು. 2014ರಲ್ಲಿ ಕ್ಷೇತ್ರಕ್ಕೆ ತಂದಿದ್ದ ಮುರಾರ್ಜಿ ದೇಸಾಯಿ ಶಾಲೆಯು ಕನಕಗಿರಿಯ ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದೆ. ಸದರಿ ಶಾಲೆಗೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಅನುದಾನ ಬಿಡುಗಡೆ ಮಾಡಲಾಗಿದೆ. ಮುಂದಿನ ತಿಂಗಳಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಲಾಗುವುದು ಎಂದರು.
ತಾಲೂಕಿನ ಆದಾಪುರ ಸರ್ಕಾರಿ ಶಾಲೆಗೆ ನಮ್ಮ ಕುಟುಂಬದಿಂದ 1 ಎಕರೆ ಭೂಮಿ ನೀಡಲಿಕ್ಕೆ ಎಲ್ಲ ಸಿದ್ಧತೆ ನಡೆಸಲಾಗಿದೆ. ಮುಂಬರುವ ದಿನಗಳಲ್ಲಿ ಕ್ಷೇತ್ರದ ಗ್ರಾಮಗಳ ರಸ್ತೆ ಅಭಿವೃದ್ಧಿಗೆ 200 ಕೋಟಿ ರೂ. ಅನುದಾನ ತರುತ್ತೇನೆ ಎಂದು ಭರವಸೆ ನೀಡಿದರು. ಈಚನಾಳದಲ್ಲಿ ನಡೆದ ಸಭೆಯಲ್ಲಿ ಜೆಸ್ಕಾಂನಿಂದ ಆಗುತ್ತಿರುವ ಸಮಸ್ಯೆಗಳ ಕುರಿತು ಜನರು ದೂರು ನೀಡಿದರು. ಇದಕ್ಕೆ ಜೆಸ್ಕಾಂ ಎಇಇ ನಾಗಪ್ಪ ಉತ್ತರಿಸಲಾಗಲಿಲ್ಲ. ಹೀಗಾಗಿ ತಹಸೀಲ್ದಾರ್ ವಿಶ್ವನಾಥ ಮುರುಡಿ, ಎಇಇ ನಾಗಪ್ಪಗೆ 24 ಗಂಟೆಯೊಳಗೆ ಉತ್ತರಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.
ಕುಡುಕರ ಕಾಟ: ಈಚನಾಳ ಗ್ರಾಮದಲ್ಲಿ ಆರಂಭಗೊಂಡ ಸಭೆಯಲ್ಲಿ ಕೆಲವರು ಮದ್ಯ ಸೇವಿಸಿ ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಲು ಮುಂದಾದರು. ಸಚಿವ ತಂಗಡಗಿ ಹಾಗೂ ಕುಡುಕರ ಮದ್ಯ ಕೆಲ ಕಾಲ ವಾಗ್ವಾದ ನಡೆಯಿತು. ನಂತರ ಪೊಲೀಸರ ಮಧ್ಯಸ್ಥಿಕೆಯಲ್ಲಿ ವಾಗ್ವಾದ ತಿಳಿಗೊಂಡಿತು.