

ಕನಕಗಿರಿ: ಬಡ ಹಾಗೂ ಮಧ್ಯಮ ವರ್ಗದವರ ಅನುಕೂಲಕ್ಕಾಗಿ ಸರ್ಕಾರಿ ಜಾರಿಗೆ ತಂದಿರುವ ಪಂಚ ಗ್ಯಾರಂಟಿಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸಲು ಅಧಿಕಾರಿಗಳು ಕ್ರಮ ವಹಿಸಬೇಕೆಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರದ ಅಧ್ಯಕ್ಷ ಹಜರತ್ ಹುಸೇನ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಶನಿವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅನ್ನಭಾಗ್ಯ ಯೋಜನೆ ಕುರಿತು ಮಾತನಾಡಿ, ಹೊಸ ಪಡಿತರ ಚೀಟಿಗೆ ಅರ್ಜಿದಾರರ ಮಾಹಿತಿ ಭರ್ತಿ ಮಾಡುವಾಗ ಆದಾಯ ಮಿತಿ ನಿಯಮಿತವಾಗಿ ನಮೂದು ಮಾಡಲು ಗ್ರಾಮ ಒನ್ ಕೇಂದ್ರದವರಿಗೆ ತಿಳಿಸಲು ಆಹಾರ ಇಲಾಖೆ ನಿರೀಕ್ಷಕರಿಗೆ ಸೂಚಿಸಿದರು. ಬಾಕಿ ಉಳಿದ 243 ಫಲಾನುಭವಿಗಳ ತಾಂತ್ರಿಕ ತೊಂದರೆ ಪರಿಹರಿಸಿ ಯೋಜನೆ ಲಾಭ ದೊರಕಿಸುವಂತೆ ಸೂಚಿಸಿದರು.
ಗೃಹಲಕ್ಷ್ಮಿ ಯೋಜನೆ ಲಾಭ ದೊರೆಯದ 139 ಫಲಾನುಭವಿಗಳ ಬಗ್ಗೆ ಅಂಗನವಾಡಿ ಕಾರ್ಯಕರ್ತೆಯರಿಂದ ಅಗತ್ಯ ಮಾಹಿತಿ ಪಡೆದು ಸಮಸ್ಯೆ ಸರಿಪಡಿಸುವಂತೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಸದರಿ ಯೋಜನೆಯಡಿ ಸಮಸ್ಯೆಗಳಿರುವ ಫಲಾನುಭವಿಗಳ ಸಂಖ್ಯೆ 154 ಇದ್ದು, ಇವುಗಳನ್ನು ತ್ವರಿತವಾಗಿ ಪೂರ್ಣಗೊಳಿಸುಂತೆ ಹೇಳಿದರು.
ಗೃಹಜ್ಯೋತಿ ಯೋಜನೆಯಡಿ ಬಾಕಿಯಿರುವ 938 ಫಲಾನುಭವಿಗಳನ್ನು ಗುರುತಿಸಿ ಯೋಜನೆ ವ್ಯಾಪ್ತಿಗೆ ತರಬೇಕು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ವಿದ್ಯಾಭ್ಯಾಸಕ್ಕೆ ತೊಂದರೆಯಾಗದಂತೆ ಬಸ್ ಸೌಕರ್ಯ ಒದಗಿಸಲು ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು. ಇದೇ ವೇಳೆ ಯುವನಿಧಿ ಯೋಜನೆ ಪ್ರಗತಿ ಪರಿಶೀಲನೆ ನಡೆಸಿ, ಸೆಪ್ಟಂಬರ್ ತಿಂಗಳಲ್ಲಿ ಆದ ಪ್ರಗತಿಗೆ ಪ್ರಶಂಸೆ ವ್ಯಕ್ತಪಡಿಸಿದರು. ಇನ್ಮುಂದೆ ಹೀಗೆ ಪ್ರಗತಿ ಸಾಧಿಸಲು ಅಧಿಕಾರಿಗಳಿಗೆ ತಿಳಿಸಿದರು.
ನಂತರ ಗ್ಯಾರಂಟಿ ಯೋಜನೆಯ ಅಧ್ಯಕ್ಷರು ಮತ್ತು ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮಾಡಲಾಯಿತು. ತಾಪಂ ಇಒ ಕೆ. ರಾಜಶೇಖರ್, ಅನುಷ್ಠಾನ ಸಮಿತಿ ಸದಸ್ಯರಾದ ನೀಲಕಂಠ ಬಡಿಗೇರ, ಸಂಚಾರಿ ನಿಯಂತ್ರಕ ಶ್ರೀರಾಮ್ ಇತರರಿದ್ದರು.