

ಕನಕಗಿರಿ: ಪಟ್ಟಣದಲ್ಲಿ ನಿರ್ಮಾಣವಾಗುತ್ತಿರುವ ಅಲ್ಪಸಂಖ್ಯಾತ ಇಲಾಖೆಯ ಮೌಲಾನಾ ಆಜಾದ್ ಮಾದರಿ ಶಾಲೆಯ ಕಟ್ಟಡ ಕಾಮಗಾರಿಯು ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎನ್ನುವ ಆರೋಪಗಳು ಸಾರ್ವಜನಿಕರಿಂದ ಕೇಳಿ ಬಂದಿವೆ.
ಅಲ್ಪಸಂಖ್ಯಾತ ಮಕ್ಕಳ ಅಭಿವೃದ್ಧಿಗಾಗಿ 2018-19ನೇ ಸಾಲಿನಲ್ಲಿ ಪಟ್ಟಣಕ್ಕೆ ಮೌಲಾನಾ ಆಜಾದ್ ಶಾಲೆ ಮಂಜೂರಾಗಿತ್ತು. ತಾತ್ಕಾಲಿಕವಾಗಿ ಕೆಪಿಎಸ್‌ನ ಪ್ರೌಢ ವಿಭಾಗದಲ್ಲಿ ಆರಂಭಿಸಲಾಗಿತ್ತು. ಶಾಲೆಯ ಸ್ವಂತ ಕಟ್ಟಡಕ್ಕಾಗಿ ಇಲ್ಲಿನ ಉದ್ಯಮಿಯೊಬ್ಬರು ಭೂ ದಾನ ಮಾಡಿದ್ದರು. ಈ ಜಾಗದಲ್ಲಿ ಮೊದಲಿಗೆ 50 ಲಕ್ಷ ರೂ. ವೆಚ್ಚದಲ್ಲಿ 4 ಕೊಠಡಿಗಳನ್ನು ನಿರ್ಮಾಣ ಮಾಡಲು ಆಗಿನ ಶಾಸಕ ಬಸವರಾಜ ದಢೇಸುಗೂರು ಚಾಲನೆ ನೀಡಿದ್ದರು. ಜತೆಗೆ 2022-23ನೇ ಸಾಲಿನಲ್ಲಿ ಇನ್ನುಳಿದ 6 ಕೊಠಡಿಗಳನ್ನು ನಿರ್ಮಿಸಲು 1.5 ಕೋಟಿ ಮಂಜೂರು ಮಾಡಲಾಗಿತ್ತು. ಕೆಆರ್‌ಐಡಿಎಲ್‌ನವರು ಕಟ್ಟಡ ಕಾಮಗಾರಿಯ ಜವಾಬ್ದಾರಿ ಹೊತ್ತಿದ್ದರು. ಆದರೆ, ಕಾಮಗಾರಿ ಮಾತ್ರ ನಿಗದಿತ ವೇಳೆಗೆ ಪೂರ್ಣಗೊಳಿಸಲು ಸಾಧ್ಯವಾಗಿಲ್ಲ.
ಕಟ್ಟಡ ಕಾಮಗಾರಿ ಪೂರ್ಣಗೊಳಿಸುವಂತೆ ಸ್ಥಳೀಯರು, ಪಾಲಕರು ಒತ್ತಾಯ ಮಾಡಿದರೂ ಸಹ ಈವರೆಗೂ ಕಟ್ಟಡ ಕಾಮಗಾರಿ ಮುಗಿದಿಲ್ಲ. ಈಗಾಗಲೇ ನಿರ್ಮಾಣಕ್ಕೆ ಸಾಕಷ್ಟು ಸಮಯ ತೆಗೆದುಕೊಂಡಿರುವ ಕಾಮಗಾರಿಯೂ ಸಂಪೂರ್ಣವಾಗಿ ಕಳಪೆಯಿಂದ ಕೂಡಿದೆ ಎನ್ನುವ ಆರೋಪಗಳು ಕೇಳಿಬಂದಿವೆ.
ಬಿಲ್ಡಿಂಗ್ ಕ್ಯೂರಿಂಗ್ ಆಗಿಲ್ಲವಾಗಿದ್ದರಿಂದ ಕಟ್ಟಡದ ಗೋಡೆಗಳಲ್ಲಿ ಎಲ್ಲೆಂದರಲ್ಲಿ ಬಿರುಕು ಕಾಣಿಸಿಕೊಂಡಿದೆ. ಬಣ್ಣ ಬಳಿದು ಮುಚ್ಚುವ ಕೆಲಸ ಮಾಡಲು ಯತ್ನಿಸಿದ್ದರಾದರೂ ಬಿರುಕುಗಳು ರಾಚುತ್ತವೆ. ಇನ್ನು ನೆಲಕ್ಕೆ ಹಾಕಿರುವ ನೆಲಹಾಸು ಸಮತಟ್ಟಾಗಿಲ್ಲ. ಗೋಡೆಗೆ ತಂಪು ಹಿಡಿದಿದೆ. ಇದರಿಂದ ಕಟ್ಟಡ ಬಹಳ ದಿನ ಬಾಳಿಕೆ ಬರುವುದಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ.
ಶೌಚಗೃಹ, ವಿದ್ಯುತ್ ಸಂಪರ್ಕವಿಲ್ಲ
ಹಲವು ವರ್ಷಗಳಿಂದ ಕೆಪಿಎಸ್‌ನ ಪ್ರೌಢ ವಿಭಾಗದಲ್ಲಿ ಮೌಲಾನಾ ಆಜಾದ್ ಶಾಲೆ ತಾತ್ಕಾಲಿಕವಾಗಿ ನಡೆಯುತ್ತಿದ್ದರಿಂದ ಇದೀಗ ಮೂಲ ಶಾಲೆಯವರಿಗೆ ಕೊಠಡಿಗಳ ಸಮಸ್ಯೆಯಾಗುತ್ತಿದೆ. ಇದರಿಂದ ಶಿಕ್ಷಕರಿಗೆ ಕೊಠಡಿಗಳನ್ನು ಬಿಟ್ಟುಕೊಡುವಂತೆ ಪತ್ರ ಬರೆಯುತ್ತಿದ್ದಾರೆ ಎನ್ನಲಾಗುತ್ತಿದೆ. ಕಟ್ಟದಲ್ಲಿ ಇನ್ನೂ ಶೌಚಗೃಹ, ವಿದ್ಯುತ್ ಸಂಪರ್ಕ, ಕುಡಿವ ನೀರು, ಆವರಣ ಸಮತಟ್ಟುಗೊಳಿಸುವುದು ಸೇರಿ ಇನ್ನಷ್ಟು ಕೆಲಸ ಮಾಡಬೇಕಿದೆ.
((ಕೋಟ್))
ಈ ಕಟ್ಟಡವನ್ನು ಹಿಂದಿನ ಅಧಿಕಾರಿಗಳು ನಿರ್ವಹಣೆ ಮಾಡಿದ್ದಾರೆ. ಈ ಬಗ್ಗೆ ಹಲವರಿಂದ ದೂರುಗಳು ಬಂದಿವೆ. ಸರಿಪಡಿಸಲು ಕ್ರಮ ವಹಿಸುವೆ. ಎಇಇ ಅವರನ್ನು ಕಳುಹಿಸಿ ಪರಿಶೀಲನೆ ಮಾಡಿಸಲಾಗುವುದು. ಶೌಚಗೃಹ ಸೇರಿದಂತೆ ಸಣ್ಣ ಪುಟ್ಟ ಕೆಲಸಗಳು ಬಾಕಿಯಿದ್ದು, ಪೂರ್ಣಗೊಳಿಸಲಾಗುವುದು.
ಅನಿಲ್ ಪಾಟೀಲ್
ಇಇ, ಕೆಆರ್‌ಐಡಿಎಲ್ ಕೊಪ್ಪಳ
((ಕೋಟ್))
ಅಲ್ಪಸಂಖ್ಯಾತ ಮಕ್ಕಳ ಶ್ರೇಯೋಭಿವೃದ್ಧಿಗಾಗಿ ಮಂಜೂರಾದ ಮೌಲಾನಾ ಆಜಾದ್ ಶಾಲೆಗೆ ಸ್ವಂತ ಕಟ್ಟಡ ದೊರೆಯಿತು ಎನ್ನುವ ಖುಷಿಯಲ್ಲಿದ್ದೇವು. ಆದರೆ, ಈ ಕಟ್ಟಡ ಕಾಮಗಾರಿಯನ್ನು ನೋಡಿದರೆ ಇದರಷ್ಟು ಕಳಪೆ ಮತ್ತೊಂದಿಲ್ಲ.
ಮಹ್ಮದ್ ಪಾಷಾ ಮುಲ್ಲಾರ