ಸಾಮೂಹಿಕ ಶೌಚಗೃಹ ನಿರ್ಮಾಣಕ್ಕೆ ಈಚನಾಳ ಮಹಿಳೆಯರ ಆಗ್ರಹ: ಕನಕಗಿರಿಯಲ್ಲಿ ದಿಢೀರ್ ಪ್ರತಿಭಟನೆ

23052022 Kanakagiri womens protest
Published on

ಕನಕಗಿರಿ: ಸಾಮೂಹಿಕ ಶೌಚಗೃಹ ನಿರ್ಮಿಸುವಂತೆ ಆಗ್ರಹಿಸಿ ತಾಲೂಕಿನ ಈಚನಾಳ ಗ್ರಾಮದ ಮಹಿಳೆಯರು ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ದಿಢೀರನೇ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

ವೈಯಕ್ತಿಕ ಶೌಚಗೃಹ ನಿರ್ಮಿಸಿಕೊಳ್ಳಲು ಗ್ರಾಮದಲ್ಲಿ ಮೂಲ ಸೌಲಭ್ಯಗಳಾದ ನೀರು ಹಾಗೂ ವಿದ್ಯುತ್ ಸಮಸ್ಯೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಹಲವು ದಿನಗಳಿಂದ ಸಾಮೂಹಿಕ ಶೌಚಗೃಹ ಸೇರಿದಂತೆ ಮೂಲ ಸೌಲಭ್ಯ ಒದಗಿಸುವಂತೆ ಆಗ್ರಹಿಸುತ್ತಿದ್ದೇವೆ. 15 ದಿನಗಳ ಹಿಂದೆ ಗ್ರಾಪಂ ಮುಂದೆ ಪ್ರತಿಭಟನೆ ನಡೆಸಿ ಅಧ್ಯಕ್ಷರಿಗೆ ಮನವಿ ಸಲ್ಲಿಸಿದ್ದೇವೆ. ಇದುವರೆಗೂ ಸೌಲಭ್ಯ ಕಲ್ಪಿಸಲು ಮುಂದಾಗಿಲ್ಲ. ಈ ಬಗ್ಗೆ ಪ್ರಶ್ನಿಸಿದರೆ, ಬೇಜವಾಬ್ದಾರಿತನದ ಉತ್ತರ ನೀಡುತ್ತಿದ್ದಾರೆ ಎಂದು ಗ್ರಾಪಂ ಆಡಳಿತ ಮಂಡಳಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ತಾಪಂ ಇಒ ಕಾವ್ಯಾರಾಣಿ ಸ್ಥಳಕ್ಕೆ ಆಗಮಿಸಿ, ವಾರದೊಳಗೆ ಸಮಸ್ಯೆ ಬಗೆಹರಿಸುವ ಭರವಸೆ ನೀಡಿ ಮನವಿ ಪತ್ರ ಸ್ವೀಕರಿಸಿದ ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು. ಎಸ್‌ಎಫ್‌ಐ ತಾಲೂಕು ಕಾರ್ಯದರ್ಶಿ ಶಿವಕುಮಾರ, ಗ್ರಾಮಸ್ಥರಾದ ಯಮನಮ್ಮ, ಮಹಾದೇವಮ್ಮ, ಹುಲಿಗೆಮ್ಮ, ದುರ್ಗಮ್ಮ, ಹನುಮೇಶ ನಾಯಕ್, ವೆಂಕೋಬ, ಹೊನ್ನೂರಪ್ಪ ಬೂದಗುಂಪಾ, ಫಕೀರಮ್ಮ, ಲಕ್ಷ್ಮಮ್ಮ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net