

ಕನಕಗಿರಿ: ವಿದ್ಯಾರ್ಥಿಗಳು ಪುಸ್ತಕಗಳ ಓದಿನಿಂದ ಜ್ಞಾನವನ್ನು ವಿಸ್ತರಿಸಿಕೊಳ್ಳಬಹುದು ಎಂದು ಗ್ರಂಥಾಲಯ ಸಂಯೋಜಕಿ ಟಿ.ಆರ್.ಸರ್ವಮಂಗಳ ಹೇಳಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಗ್ರಂಥಾಲಯ ಪಿತಾಮಹ ಮತ್ತು ಪ್ರಥಮ ಗ್ರಂಥಪಾಲಕ ಡಾ.ಎಸ್.ಆರ್ ರಂಗನಾಥನ್ ಜನ್ಮದಿನದ ಕಾರ್ಯಕ್ರಮದಲ್ಲಿ ಮಾತನಾಡಿದರು. ವಿದ್ಯಾರ್ಥಿಗಳಿಗೆ ಗ್ರಂಥಾಲಯಗಳು ಜ್ಞಾನದೀಪ್ತಿ ಇದ್ದಂತೆ. ಅದನ್ನು ಪರಿಪೂರ್ಣವಾಗಿ ಉಪಯೋಗಿಸಿಕೊಳ್ಳಬೇಕು.
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ಗ್ರಂಥಾಲಯಗಳ ಮಹತ್ವ ಹೆಚ್ಚಿದೆ ಎಂದರು. ಪ್ರಾಚಾರ್ಯ ಡಾ.ಭಜರಂಗಬಲಿ ಮಾತನಾಡಿ, ಓದುವ ಹವ್ಯಾಸ ವೃದ್ಧಿಸಿಕೊಂಡು ಜ್ಞಾನವಂತರಾಗಿ ಸಮಾಜಕ್ಕೆ ಉತ್ತಮ ಕೊಡುಗೆಯನ್ನು ನೀಡಬೇಕು. ಗ್ರಂಥಾಲಯಗಳ ಪ್ರಯೋಜನೆಯನ್ನು ಪಡೆಯಬೇಕು ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ವಿದ್ಯಾರ್ಥಿಗಳಿಗೆ ಓದುವ ಹವ್ಯಾಸವನ್ನು ಬೆಳೆಸಲು ಪೂರಕವಾದ ಚಿತ್ರಕಲಾ ಸ್ಪರ್ಧೆ, ನೆನಪಿನ ಶಕ್ತಿಯ ಆಟ, ಪ್ರಬಂಧ ಸ್ಪರ್ಧೆ, ಮಾದರಿ ಓದು, ರಸಪ್ರಶ್ನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.