

ಕನಕಗಿರಿ: ತಾಲೂಕಿನ ಲಾಯದುಣಸಿ ಕೆರೆ ಭರ್ತಿ ಮಾಡಲು ಆಗ್ರಹಿಸಿ ರೈತ ಸಂಘ ಕಲ್ಯಾಣ ಕರ್ನಾಟಕ ಹಾಗೂ ಹಸಿರು ಸೇನೆ ಮತ್ತು ಅಖಿಲ ಭಾರತ ಕೃಷಿ ಗ್ರಾಮೀಣ ಕಾರ್ಮಿಕರ ಸಂಘದಿಂದ ಪಟ್ಟಣದ ತಹಸಿಲ್ ಕಚೇರಿ ಮುಂಭಾಗ ಬುಧವಾರ ಪ್ರತಿಭಟನೆ ನಡೆಯಿತು.
ರಾಜ್ಯ ಸರ್ಕಾರ ಸಣ್ಣ ನೀರಾವರಿ ಇಲಾಖೆಯಿಂದ 2014-15ನೇ ಸಾಲಿನಲ್ಲಿ ಸುಮಾರು 144 ಕೋಟಿ ರೂ. ಖರ್ಚು ಮಾಡಿ ಕನಕಗಿರಿ ಕ್ಷೇತ್ರದಲ್ಲಿನ ಕೆರೆ ತುಂಬವ ಯೋಜನೆಯನ್ನು ಪೂರ್ಣಗೊಳಿಸಿದೆ. ಯೋಜನೆ ಪೂರ್ಣಗೊಂಡು ಹತ್ತಾರು ವರ್ಷ ಕಳೆದಿವೆ. ಆದರೆ, ಇದುವರೆಗೂ ಲಾಯದುಣಸಿ ಕೆರೆ ಭರ್ತಿ ಮಾಡಿಲ್ಲ. ಈ ಕುರಿತು ಹಲವು ಬಾರಿ ಮನವಿ ಮಾಡಿದರೂ ಸಹ ಪ್ರಯೋಜನವಾಗಿಲ್ಲ ಎಂದು ಕೃಷಿ ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಧ್ಯಕ್ಷ ಕೆಂಚಪ್ಪ ಹಿರೇಖೇಡ ಆರೋಪಿಸಿದರು.
ರೈತ ಮುಖಂಡ ಮರಿಯಪ್ಪ ಸಾಲೋಣಿ ಮಾತನಾಡಿ, ಕಳೆದ ಮೂರ್ನಾಲ್ಕು ವರ್ಷಗಳಿಂದ ಮಳೆಯ ಪ್ರಮಾಣ ಕಡಿಮೆಯಾಗಿದೆ. ಕೆರೆಗೆ ನೀರು ಹರಿದು ಬರದೆ ಇರುವುದರಿಂದ ಈ ಪ್ರದೇಶದ ಕೊಳವೆಬಾವಿಗಳ ನೀರಿನ ಮಟ್ಟ ಕುಸಿದಿದೆ. ಹೀಗಾಗಿ ರೈತರು ಸರಿಯಾದ ಬೆಳೆ ಬೆಳೆಯಲು ಸಾಧ್ಯವಾಗುತ್ತಿಲ್ಲ. ಲಾಯದುಣಸಿ ಕೆರೆಗೆ ಈಗಾಗಲೇ ಕೃಷ್ಣ ಬಿ ಸ್ಕೀಮ್ ಪೈಪ್ ಲೈನ್ ಮಾಡಲಾಗಿದ್ದು, ಆ ನೀರು ಸಹ ಕೆರೆಗೆ ಬಿಟ್ಟಿಲ್ಲ. ರೈತರಿಗೆ ಅನುಕೂಲವಾಗುವಂತೆ ತುಂಗಭದ್ರಾ ಅಥವಾ ಆಲಮಟ್ಟಿ ನದಿಯಿಂದ ನೀರು ಹರಿಸಿ ಲಾಯದುಣಸಿ ಕೆರೆಯನ್ನು ತುಂಬಿಸಬೇಕೆಂದು ಒತ್ತಾಯಿಸಿದರು.
ಸಣ್ಣ ನೀರಾವರಿ ಇಲಾಖೆಯ ಎಇಇ ಜಗನ್ನಾಥ ಮಾತನಾಡಿ, ತುಂಗಭದ್ರಾ ನದಿಯಲ್ಲಿ ನೀರಿನ ಪ್ರಮಾಣ ಕುಸಿದಿದೆ. ಮುಂದಿನ ವಾರದಲ್ಲಿ ನೀರು ನದಿ ಬಿಡಲಾಗುತ್ತಿದ್ದು, ನೀರಿನ ಪ್ರಮಾಣ ಆಧರಿಸಿ ಲಾಯದುಣಸಿ ಕೆರೆಗೆ ನೀರು ಬಿಡಲಾಗುವುದು. ಜು.10ರ ನಂತರ ಕೃಷ್ಣ ಜಲಭಾಗ್ಯ ನಿಗಮದ ಪೈಪ್ ಲೈನ್ ಮೂಲಕ ನೀರು ಹರಿಸುವ ಯೋಚನೆ ಇದೆ ಎಂದು ಮಾಹಿತಿ ನೀಡಿದರು.
ಕೆರೆ ಹೂಳು ಸಂಗ್ರಹವಾಗಿದ್ದು, ನೀರಿನ ಸಂಗ್ರಹ ಕಡಿಮೆಯಾಗುತ್ತಿದೆ. ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಆಗ ತಹಸೀಲ್ದಾರ್ ವಿಶ್ವನಾಥ್ ಮುರುಡಿ, ಇಒ ರಾಜಶೇಖರಗೆ ನರೇಗಾದಡಿ ಹೂಳು ತೆಗೆಸಲು ಕ್ರಮ ವಹಿಸಬೇಕು ಎಂದು ಸೂಚನೆ ನೀಡಿದರು.
ರೈತ ಮುಖಂಡರಾದ ರಾಮಣ್ಣ ಜಾಡಿ, ಸಣ್ಣ ಹನುಮಂತ, ವಿರೂಪಣ್ಣ ಪೂಜಾರ, ಹೊಳಿಯಪ್ಪ ಲಾಯದುಣಸಿ, ಅಮರಯ್ಯಸ್ವಾಮಿ, ರಾಜಪ್ಪ ಲಾಯದುಣಸಿ, ರಾಮಣ್ಣ ಬಸಾಪುರ, ಬಾಳಪ್ಪ ಬಂಡಿಗೇರಿ, ಕೆರೆ ಹನುಮಪ್ಪ ಕಾರಟಗಿ ಇತರರಿದ್ದರು.