ಊರಿಗಾಗಿ ಸ್ವಂತ ಖರ್ಚಿನಲ್ಲಿ ಬೋರ್‌ವೆಲ್ ಕೊರೆಯಿಸಿದ ಯುವಕ

borewell
ಕನಕಗಿರಿ ತಾಲೂಕಿನ ಲಾಯದುಣಸಿ ಗ್ರಾಮದಲ್ಲಿ ಯುವಕ ಶಿವಕುಮಾರ ಈಳಿಗೇರ ಸೋಮವಾರ ಕೊರೆಯಿಸಿರುವ ಬೋರ್‌ವೆಲ್‌ನಿಂದ ನೀರು ಬಿದ್ದಿರುವುದು.
Published on

ಕನಕಗಿರಿ: ಕಳೆದೊಂದು ವರ್ಷದಿಂದ ಕುಡಿವ ನೀರಿನ ಅಭಾವ ಅನುಭವಿಸುತ್ತಿದ್ದ ತಾಲೂಕಿನ ಲಾಯದುಣಸಿ ಗ್ರಾಮದಲ್ಲಿ ಯುವಕನೋರ್ವ ಸ್ವಂತ ಖರ್ಚಿನಿಂದ 4 ಬೋರ್‌ವೆಲ್ ಕೊರೆಯಿಸಿದ್ದು, ಒಂದರಲ್ಲಿ ಉತ್ತಮ ನೀರು ದೊರೆತಿದೆ. ಈ ನೀರನ್ನು ಗ್ರಾಮಕ್ಕೆ ಸರಬರಾಜು ಮಾಡಲು ಮುಂದಾಗಿದ್ದಾನೆ.

ಈ ಹಿಂದೆ ಗ್ರಾಮದಲ್ಲಿ ಬೋರ್‌ವೆಲ್ ಕೊರೆಯಿಸಿದ್ದರೂ ನೀರು ದೊರೆತಿರಲಿಲ್ಲ. ಆ ಬಳಿಕ ಜನಪ್ರತಿನಿಧಿಗಳು, ಅಧಿಕಾರಿಗಳಿಗೆ ನೀರಿನ ಅಭಾವವಿರುವ ಬಗ್ಗೆ ಗಮನಕ್ಕೆ ತಂದರೂ ಕೆಲಸವಾಗಿರಲಿಲ್ಲ. ಅಧಿಕಾರಿಗಳು ಸಹ ಅನುದಾನ ಕೊರತೆ ನೆಪದಲ್ಲಿ ಬೋರ್‌ವೆಲ್ ಕೊರೆಯಿಸಿರಲಿಲ್ಲ ಎನ್ನಲಾಗಿದೆ.

ಓಣಿಗಳಲ್ಲಿ ನೀರಿಗಾಗಿ ಮಹಿಳೆಯರು ಜಗಳವಾಡುತ್ತಿರುವುದು ಕಂಡ ಗ್ರಾಮದ ಯುವಕ ಶಿವಕುಮಾರ ಈಳಿಗೇರ, 80 ಸಾವಿರ ರೂ. ಸ್ವಂತ ಹಣದಲ್ಲಿ ಸ್ವ ಇಚ್ಛೆಯಿಂದ 4 ಬೋರ್‌ವೆಲ್ ಕೊರೆಯಿಸಿದ್ದಾರೆ. ಮೊದಲನೇ ಮೂರು ಬೋರ್‌ವೆಲ್‌ನಲ್ಲಿ ನೀರು ದೊರೆಯದಿದ್ದಾಗ ದೃತಿಗೆಡದೇ 4ನೇ ಬೋರ್‌ವೆಲ್ ಕೊರೆಯಿಸಿದ್ದು, ನೀರು ದೊರೆತಿದೆ. ಇದರಿಂದ ಯುವಕ ಖುಷಿಗೊಂಡಿದ್ದು, ಆತನ ಸ್ನೇಹಿತರು ಸಂತಸಗೊಂಡಿದ್ದಾರೆ. ಯುವಕನ ಕೆಲಸಕ್ಕೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನೀರು ದೊರೆತಿರುವ ಬೋರ್‌ವೆಲ್‌ನಿಂದ ಈ ಹಿಂದೆ ಇರುವ ಪೈಪ್‌ಲೈನ್‌ಗೆ ಸಂಪರ್ಕ ಕಲ್ಪಿಸಿ ಗ್ರಾಮಕ್ಕೆ ನೀರು ಸರಬರಾಜು ಮಾಡಲು ಗ್ರಾಮ ಪಂಚಾಯಿತಿಗೆ ಕೋರಿದ್ದಾರೆ. ಇದರಿಂದ ಶಾಲಾ ಮಕ್ಕಳು ಸೇರಿ ಗ್ರಾಮಸ್ಥರಿಗೆ ಅನುಕೂಲವಾಗಲಿದೆ ಎಂದು ಯುವಕ ತಿಳಿಸಿದ್ದಾನೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net