

ಕನಕಗಿರಿ: ಕೃಷ್ಣ ಬಿ ಸ್ಕೀಂ ಯೋಜನೆಯಡಿ ತಾಲೂಕಿನ ಕೆರೆಗಳನ್ನು ತುಂಬಿಸುವುದು ಮತ್ತು ತುಂಗಭದ್ರಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗಳಿಗೆ ಏ.20ವರೆಗೆ ನೀರು ಹರಿಸುವಂತೆ ಆಗ್ರಹಿಸಿ ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆಯಿಂದ ಸೋಮವಾರ ತಹಸೀಲ್ದಾರ್ ವಿಶ್ವನಾಥ ಮುರುಡಿ ಮೂಲಕ ಸಿಎಂಗೆ ಮನವಿ ಸಲ್ಲಿಸಲಾಯಿತು.
ಸೇನೆ ಅಧ್ಯಕ್ಷ ಶರಣಪ್ಪ ದೊಡ್ಡಮನಿ ಮಾತನಾಡಿ, ತುಂಗಭದ್ರಾ ನದಿಯಿಂದ ಕೆರೆ ತುಂಬುವ ಯೋಜನೆಯಡಿ ಭರ್ತಿಯಾಗಬೇಕಾದ ತಾಲೂಕಿನ ಹಲವು ಕೆರೆಗಳು ತುಂಬಿಲ್ಲ. ಹೀಗಾಗಿ ಕೃಷ್ಣ ಬಿ ಸ್ಕೀಂ ಯೋಜನೆ ವಿಸ್ತರಿಸಿ ಕನಕಗಿರಿ ತಾಲೂಕಿನ ಎಲ್ಲ ಕೆರೆಗಳಿಗೆ ನೀರು ತುಂಬಿಸಬೇಕು. ತುಂಗಭದ್ರಾ ನದಿಯಿಂದ ಎಡದಂಡೆ ಕಾಲುವೆಗೆ ಏ.20ವರೆಗೆ ನೀರು ಹರಿಸಬೇಕು ಎಂದು ಆಗ್ರಹಿಸಿದರು.
ಧಾರ್ಮಿಕ ಹಾಗೂ ಐತಿಹಾಸಿಕ ಕ್ಷೇತ್ರ ಕನಕಗಿರಿಯಲ್ಲಿ ಕೆಲ ರೆಸಾರ್ಟ್‌ಗಳು ಅಕ್ರಮವಾಗಿ ನಡೆಯುತ್ತಿದ್ದು, ಇಲ್ಲಿ ವೇಶ್ಯಾವಾಟಿಕೆಯಂತಹ ಚಟುವಟಿಕೆ ನಡೆಯುತ್ತಿವೆ. ಇದರಿಂದ ಜಿಲ್ಲೆಯಲ್ಲಿ ಪಟ್ಟಣದ ಗೌರವ ಹರಾಜಾಗುತ್ತಿದೆ. ಇತ್ತೀಚೆಗೆ ಕನಕಗಿರಿಯ ಜಂಗಲ್ ರೆಸಾರ್ಟ್‌ನಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಕಾನೂನು ಬಾಹಿರವಾಗಿ ಆತನ ಶವ ಸಾಗಣೆ ಮಾಡಲಾಗಿದೆ. ತಾಲೂಕು ವ್ಯಾಪ್ತಿಯಲ್ಲಿ ಹೆಚ್ಚಿದ ಮಟ್ಕಾ, ಅಕ್ರಮ ಮರಳು ಸಾಗಣೆಗೆ ಪೊಲೀಸರೇ ಬೆಂಗಾವಲಾಗಿರುವ ಆರೋಪಗಳಿವೆ. ಈ ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಹುಲಿಹೈದರ ಗ್ರಾಮದಲ್ಲಿ ಪದವಿ ಪೂರ್ವ ಕಾಲೇಜು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಪ್ರಾರಂಭಿಸಬೇಕು, ಕನಕಗಿರಿ ಬಸ್ ನಿಲ್ದಾಣದಲ್ಲಿ ಇಂದಿರಾ ಕ್ಯಾಂಟೀನ್, ಪಟ್ಟಣದಲ್ಲಿ ಉಪ ನೋಂದಣಾಧಿಕಾರಿ ಕಚೇರಿ ಆರಂಭಿಸಬೇಕು. ಜೆಸ್ಕಾಂ ಎಇಇ ಕಚೇರಿ ಮಂಜೂರು ಬಗ್ಗೆ ಸ್ಪಷ್ಟನೆ ನೀಡಬೇಕು. ಕನಕಗಿರಿಯನ್ನು ಧುಳು ಮುಕ್ತ ಪಟ್ಟಣವಾಗಿಸಬೇಕು. ಶೀಘ್ರವೇ ಕನಕಗಿರಿ ಉತ್ಸವ ದಿನಾಂಕ ನಿಗದಿಪಡಿಸಬೇಕು. ಕಿರಿದಾಗಿರುವ ಹುಲಿಹೈದರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು ಬೇರೆಡೆ ಸ್ಥಳಾಂತರಿಸಬೇಕು ಎಂದು ಒತ್ತಾಯಿಸಿದರು.
ಆದೇಶ, ಶೇಖರಪ್ಪ, ಮಹೇಶ, ಆಂಜನೇಯ ಬಿ, ಬಸವರಾಜ, ವೀರೇಶ, ಹನುಮನಗೌಡ ಇತರರಿದ್ದರು.