ಕೊಂತಿ ರೊಟ್ಟಿ ಹಬ್ಬಕ್ಕೆ ಮನಸೋತ ಜನ

Konti Roti festival
ಕೊಂತಿರೊಟ್ಟಿ ಹಬ್ಬದಾಚರಣೆಗಾಗಿ ಮನೆಯ ಮೇಲೆ ಸಗಣಿ ಸಾರಿಸಿ ರಂಗೋಲಿಯ ಚಿತ್ತಾರದೊಳಗೆ ಬಗೆ ಬಗೆಯ ಭಕ್ಷೃಗಳನ್ನು ಜೋಡಿಸಿಟ್ಟಿರುವುದು.
Published on

ಕನಕಗಿರಿ: ರಾಯಚೂರು, ಬಳ್ಳಾರಿ, ವಿಜಯನಗರ ಸೇರಿ ಆಂಧ್ರ, ತೆಲಂಗಾಣದಲ್ಲಿ ಹೆಚ್ಚು ಆಚರಣೆಯಲ್ಲಿರುವ ಕೊಂತಿ ರೊಟ್ಟಿ ಹಬ್ಬವನ್ನು ಪಟ್ಟಣದ ಹಲವು ಮನೆಗಳಲ್ಲಿ ಭಾನುವಾರ ಆಚರಿಸಲಾಯಿತು.

ಗೌರಿ ಹುಣ್ಣಿಮೆಯಲ್ಲಿ ಪ್ರತಿಷ್ಠಾಪನೆ ಮಾಡುವ ಗೌರಮ್ಮಳನ್ನು ವಿಸರ್ಜಿಸಿದ ಮರುದಿನ ಕೊಂತಿ ರೊಟ್ಟಿ ಹಬ್ಬ ಆಚರಿಸಲಾಗುತ್ತದೆ. ನಾನಾ ಬಗೆಯ ಭಕ್ಷ್ಯ ತಯಾರಿಸಿ ನೆರೆ ಹೊರೆಯವರನ್ನು ಕರೆದು ಮನೆಯ ಮಾಳಿಗೆ ಮೇಲೆ ಸಂಜೆ ವೇಳೆ ಕೊಂತೆಮ್ಮ (ಮಣ್ಣಿನ ಮೂರ್ತಿ)ಳನ್ನಿಟ್ಟು ಸಕ್ಕರೆ ಆರತಿಯಿಂದ ಪೂಜಿಸಲಾಗುತ್ತದೆ. ಮಹಿಳೆಯರು, ಮಕ್ಕಳು ಪಟಾಕಿ ಸಿಡಿಸಿ ಸಂಭ್ರಮಿಸುತ್ತಾರೆ.

ಎಲ್ಲರೂ ಸೇರಿ ಬೆಳದಿಂಗಳ ಊಟದಂತೆ ಸಾಮೂಹಿಕ ಭೋಜನ ಸವಿಯುವುದು ವಾಡಿಕೆ. ಆದರೆ, ಈ ಭಾಗದಲ್ಲಿ ಅಷ್ಟೊಂದು ಪ್ರಚಲಿತದಲ್ಲಿ ಇಲ್ಲದ ಈ ಹಬ್ಬವನ್ನು ಪ್ರಚಲಿತ ಪ್ರದೇಶದಿಂದ ಇಲ್ಲಿಗೆ ಮದುವೆಯಾಗಿ ಬಂದ ಮಹಿಳೆಯರು, ಇಲ್ಲಿಯೂ ಕೊಂತಿರೊಟ್ಟಿ ಹಬ್ಬ ಆಚರಿಸಲು ಮುಂದಾಗಿದ್ದಾರೆ.

ಕಳೆದೆರಡು ಮೂರು ವರ್ಷಗಳಿಂದ ಈ ಭಾಗದಲ್ಲಿ ಈ ಹಬ್ಬ ಆಚರಣೆಗೆ ಬಂದಿದ್ದು, ವರ್ಷದಿಂದ ವರ್ಷಕ್ಕೆ ಆಚರಿಸುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಈ ರೀತಿಯ ಆಚರಣೆ ಇಷ್ಟಪಟ್ಟವರು ಮುಂದಿನ ವರ್ಷದಿಂದ ತಾವೂ ಹಬ್ಬ ಆಚರಿಸುವ ಇಚ್ಛೆ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net