

ಕನಕಗಿರಿ: ಜಾನುವಾರು ಗಣತಿ ಕಾರ್ಯ ಶೀಘ್ರವೇ ಮುಗಿಸಲು ಪಶು ಇಲಾಖೆಯ ಅಧಿಕಾರಿಗಳು ಮುಂದಾಗಬೇಕು ಎಂದು ತಾಪಂ ಆಡಳಿತಾಧಿಕಾರಿ ಅಮೀನ್ ಅತ್ತಾರ್ ಹೇಳಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಗುರುವಾರ ಕನಕಗಿರಿ, ಕಾರಟಗಿ ತಾಲೂಕುಗಳ ಸಾಮಾನ್ಯ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನಾನಾ ಇಲಾಖೆಗಳ ಪ್ರಗತಿ ವರದಿ ವಾಚನದ ಬಳಿಕ ಪಶು ಇಲಾಖೆ ಸಹಾಯಕ ನಿರ್ದೇಶಕ ಡಾ. ಅರುಣ್‌ಗುರು, ಇಲಾಖೆಯ ಪ್ರಗತಿ ವರದಿ ಮಂಡಿಸಿದರು. 21ನೇ ಜಾನುವಾರು ಗಣತಿಯು ಫೆ.28ಕ್ಕೆ ಮುಕ್ತಾಯಗೊಳ್ಳಲಿದ್ದು, ನಮ್ಮ ಜಿಲ್ಲೆಯು ಸರ್ವೇಯಲ್ಲಿ 7ನೇ ಸ್ಥಾನದಲ್ಲಿದೆ. ಕಂದು ರೋಗಕ್ಕೆ ಜಾನುವಾರುಗಳಿಗೆ ಲಸಿಕೆ ಹಾಕಲಾಗುತ್ತಿದ್ದು, ರೇಬಿಸ್ ರೋಗಕ್ಕೆ ಮುಂಜಾಗ್ರತಾ ಕ್ರಮವಾಗಿ ಬೀದಿ ನಾಯಿಗಳಿಗೆ ಲಸಿಕೆ ಹಾಕಲಾಗುತ್ತಿದೆ ಎಂದು ಅರುಣ್‌ಗುರು ತಿಳಿಸಿದರು. ಆಗ ಅಡಳಿತಾಧಿಕಾರಿಗಳು ಲಸಿಕಾ ಪ್ರಕ್ರಿಯೆ ಮುಂದುವರಿಸಬೇಕು ಹಾಗೂ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಜಾನುವಾರುಗಳ ಸರ್ವೇ ಬೇಗ ಮುಗಿಸಬೇಕು ಎಂದು ತಿಳಿಸಿದರು.
ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ನೂತನ ಸ್ವಯಂ ಚಾಲಿತ ಹವಾಮಾನ ಘಟಕದ ಪ್ರಗತಿ ಬಗ್ಗೆ ಪ್ರಚುರಪಡಿಸುವಂತೆ ತೋಟಗಾರಿಕೆ ಇಲಾಖೆಯ ಎಡಿ ದುರ್ಗಾಪ್ರಸಾದ್‌ಗೆ ಸೂಚಿಸಿದರು.
ಸಿಡಿಪಿಒ ವಿರೂಪಾಕ್ಷಿ, ಹಿಂವ ವಿಸ್ತರಣಾಧಿಕಾರಿ ಉಷಾ, ಉಪ ವಲಯ ಅರಣ್ಯಾಧಿಕಾರಿ ಸುಭಾಷ್‌ಚಂದ್ರ, ಕೃಷಿ ಇಲಾಖೆ ಎಡಿ ಸಂತೋಷ ಪಟ್ಟದಕಲ್ ಇಲಾಖೆಯ ವರದಿ ಒಪ್ಪಿಸಿದರು.
ತಾಪಂ ಇಒಗಳಾದ ಲಕ್ಷ್ಮೀದೇವಿ, ಕೆ. ರಾಜಶೇಖರ, ಕಾರಟಗಿ ತಾಪಂ ಯೋಜನಾ ಅಧಿಕಾರಿ ರಾಘವೇಂದ್ರ ಘನಾತೆ ಇತರರಿದ್ದರು.
ಹೋರಾಟಕ್ಕೆ ಬೆಂಬಲ ಸೂಚಿಸೋಣ: ಒಪಿಎಸ್‌ಗಾಗಿ ಆಗ್ರಹಿಸುತ್ತಿರುವ ಎನ್‌ಪಿಎಸ್ ನೌಕರರು ಸಭೆಗೆ ಆಗಮಿಸಿ ಒಪಿಎಸ್‌ಗಾಗಿ ಅಂಚೆ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸುತ್ತಿದ್ದು, ನಮ್ಮ ಬೇಡಿಕೆಗೆ ತಾವುಗಳು ಬೆಂಬಲವಾಗಿರುವಂತೆ ಪತ್ರ ಚಳುವಳಿ ನಡೆಸುತ್ತಿದ್ದೇವೆ. ಫೆ.7ರಂದು ಬೆಂಗಳೂರಿನಲ್ಲಿ ನಡೆಯುವ ಉಪವಾಸ ಸತ್ಯಾಗ್ರಹಕ್ಕೆ ಬೆಂಬಲಿಸಬೇಕೆಂದು ಮನವಿ ಮಾಡಿದರು. ಆಗ ಮಾತನಾಡಿದ ತಾಪಂ ಆಡಳಿತಾಧಿಕಾರಿ ಅಮೀನ್ ಅತ್ತಾರ್, ಒಪಿಎಸ್‌ನವರು ಸಹ ಎನ್‌ಪಿಎಸ್‌ನವರ ಹೋರಾಟಕ್ಕೆ ಬೆಂಬಲಿಸಿ ಅವರ ನಿವೃತ್ತಿ ಜೀವನವೂ ಸುಖಕರವಾಗಿರಲಿ ಎಂದು ಬಯಸೋಣ ಎಂದರು.
ಕೊರಳಲ್ಲಿರಲಿಲ್ಲ ಐಡಿ ಕಾರ್ಡ್: ಸಚಿವ ಶಿವರಾಜ ತಂಗಡಗಿ, ಕಳೆದ ತಿಂಗಳು ತಾಪಂನಲ್ಲಿ ನಡೆದ ಸಭೆಯಲ್ಲಿ ಸರ್ಕಾರಿ ನೌಕರರು ಕೊರಳಲ್ಲಿ ಕಡ್ಡಾಯವಾಗಿ ಐಡಿ ಕಾರ್ಡ್ ಹಾಕಿಕೊಳ್ಳುವಂತೆ ಸೂಚಿಸಿದ್ದರು. ಆದರೆ, ಗುರುವಾರದ ಸಭೆಯಲ್ಲಿ ತಾಪಂ ಇಒ ರಾಜಶೇಖರ, ಆಡಳಿತಾಧಿಕಾರಿ ಅಮೀನ್ ಅತ್ತಾರ್, ಯೋಜನಾಧಿಕಾರಿ ರಾಘವೇಂದ್ರ ಸಹಿತ ಹಲವು ಅಧಿಕಾರಿಗಳ ಕೊರಳಲ್ಲಿ ಟ್ಯಾಗ್ ಇಲ್ಲದಿರುವುದು ಇಲಾಖೆ ಸಚಿವರ ತವರು ಕ್ಷೇತ್ರದಲ್ಲಿಯೇ ಆದೇಶಕ್ಕೆ ಬೆಲೆಯಿಲ್ಲದಂತಾಗಿದೆ ಎನ್ನುವ ಮಾತುಗಳು ಕೇಳಿಬಂದವು.