

ಕನಕಗಿರಿ: ಯುವಕರಿಗೆ 21 ಹಾಗೂ ಯುವತಿಯರಿಗೆ 18 ವರ್ಷದ ವಯಸ್ಸಿನ ಒಳಗೆ ಮದುವೆ ಮಾಡುವುದು ಕಾನೂನು ಪ್ರಕಾರ ಅಪರಾಧ ಎಂದು ಕರಡೋಣ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮೇಲ್ವಿಚಾರಕಿ ಶ್ರೀದೇವಿ ಹೇಳಿದರು.
ತಾಲೂಕಿನ ಕರಡೋಣ ಗ್ರಾಪಂ ವ್ಯಾಪ್ತಿಯ ಯತ್ನಟ್ಟಿ ಗ್ರಾಮದಲ್ಲಿ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ಕಾರ್ಮಿಕ ದಿನಾಚರಣೆ, ಮಹಿಳಾ ದಿನಾಚರಣೆ, ಮಹಿಳಾ ವಿಶೇಷ ಗ್ರಾಮ ಸಭೆಯ, ಮಹಿಳಾ ಕಾಯಕೋತ್ಸವ ಅಭಿಯಾನ, ಕಾಮಗಾರಿಯ ಭೂಮಿ ಪೂಜೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಬಾಲ್ಯ ವಿವಾಹದಿಂದ ಹೆಣ್ಣುಮಕ್ಕಳಿಗೆ ಸಮಸ್ಯೆಗಳು ಉಂಟಾಗಲಿವೆ. ಇನ್ನು ಬಾಲ್ಯ ವಿವಾಹ, ಬಾಲ ಕಾರ್ಮಿಕ ಪದ್ಧತಿಗೆ ಒಳಪಡಿಸಿದವರಿಗೆ ಕಾನೂನು ಪ್ರಕಾರ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ ಎಂದರು.
ಗ್ರಾಪಂ ಪಿಡಿಒ ನಾಗಲಿಂಗಪ್ಪ ಮಾತನಾಡಿ, ನರೇಗಾ ಕಾಮಗಾರಿ ಕೂಲಿ ಕೆಲಸದಲ್ಲಿ ಪುರುಷರಷ್ಟೇ ಮಹಿಳೆಯರಿಗೆ ಸಮಾನ ವೇತನ ನೀಡಲಾಗುವುದು ಎಂದು ತಿಳಿಸಿದರು.
ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚು ಅಂಕ ಪಡೆದ ಗ್ರಾಮದ ವಿದ್ಯಾರ್ಥಿನಿ ದೇವಮ್ಮ ಹಟ್ಟೆರ್, ಹಿರಿಯ ಮಹಿಳೆ ಶಿವಮ್ಮ ನಾಗಪ್ಪ ಕರಡೋಣ, ಮೇಲ್ವಿಚಾರಕಿ ಶ್ರೀದೇವಿ ಅವರನ್ನು ಸನ್ಮಾನಿಸಲಾಯಿತು.
ಗ್ರಾಪಂ ಅಧ್ಯಕ್ಷ ಹೀರೆ ಹನುಮಂತಪ್ಪ ಮಂದ್ಲಾರ, ಸದಸ್ಯರಾದ ಶಾರದಾ ನಾಗರಾಜ, ಕಂಪ್ಲಿಗೌಡ, ಮಲ್ಲಪ್ಪ ಕನಕಗಿರಿ, ಪಿಡಿಒ ನಾಗಲಿಂಗಪ್ಪ, ಸಿಡಿಪಿಒ ಕಚೇರಿಯ ಮೇಲ್ವಿಚಾರಕಿ ಶ್ರೀದೇವಿ, ತಾಂತ್ರಿಕ ಸಹಾಯಕ ಮಹೇಶ್ ರೆಡ್ಡಿ, ಸಿಎಚ್‌ಒ ಶರಣಬಸವ, ಗ್ರಾಪಂ ಸಿಬ್ಬಂದಿ ಕಾಳಪ್ಪ, ನೂರ್ ಪಾಷಾ, ವೀರೇಶ್, ಮಹಾಂತೇಶ, ಬಿಎಫ್‌ಟಿ ಮಂಜುಳಾ, ಜಿಕೆಎಮ್ ಜಿಂಕಮ್ಮ, ಎಂಬಿಕೆ ಪಲ್ಲವಿ ಗುಡದೂರ, ಪಶು ಸಕಿ ಶ್ರೀದೇವಿ ಬುನ್ನಟ್ಟಿ, ಯತ್ನಟ್ಟಿ ಸೇರಿ ಇತರರಿದ್ದರು.