

ಕನಕಗಿರಿ: ತಾಲೂಕಿನ ಕರಡಿಗುಡ್ಡ ಗ್ರಾಮದಲ್ಲಿ ಕೆಲ ದಿನಗಳಿಂದ ಉಪಟಳ ನೀಡುತ್ತಿದ್ದ ಚಿರತೆ ಸೆರೆ ಹಿಡಿಯಲು ಅರಣ್ಯ ಇಲಾಖೆ ಶುಕ್ರವಾರ ಬೋನು ಇರಿಸಿದೆ. ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳದಲ್ಲಿಯೇ ಮೊಕ್ಕಂ ಹೂಡಿದ್ದಾರೆ.
ಅಲ್ಲದೆ, ಚಿರತೆ ದಾಳಿಯಿಂದ ತಪ್ಪಿಸಿಕೊಳ್ಳಲು ಸ್ಥಳೀಯರಿಗೆ ರಾತ್ರಿ ಓಡಾಟ ನಡೆಸದಂತೆ, ಬೆಂಕಿ ಹಾಕಿ ಹೊಗೆ ಎಬ್ಬಿಸುವುದು ಸೇರಿ ಇನ್ನಿತರ ಮುನ್ನೆಚ್ಚರಿಕಾ ಕ್ರಮಗಳನ್ನು ತಿಳಿಸಿದ್ದಾರೆ. ಎರಡು ದಿನ ರಾತ್ರಿ ಕಾವಲು ಕಾಯ್ದು ಸ್ಥಳೀಯರಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡ ಇಲಾಖೆಯ ಸಿಬ್ಬಂದಿ ಆನೆಗೊಂದಿಯ ವಾಲೀಕಿಲ್ಲಾದ ಬಳಿ ನರಭಕ್ಷಕ ಚಿರತೆಯನ್ನು ಹಿಡಿಯಲು ದರೋಜಿಯಿಂದ ತರಿಸಲಾಗಿದ್ದ ಬೋನನ್ನು ಶುಕ್ರವಾರ ವಾಹನದಲ್ಲಿ ಕರಡಿಗುಡ್ಡಕ್ಕೆ ಸಾಗಿಸಿ, ಚಿರತೆಯಿರುವ ಗುಡ್ಡದ ಕೆಳಗೆ ಸ್ಥಳೀಯರ ಸಹಾಯದಿಂದ ಇರಿಸಿದ್ದಾರೆ.
ಬೋನು ತರುವ ವೇಳೆಗೂ ಗುಡ್ಡದ ಮೇಲೆ ಶುಕ್ರವಾರ ಚಿರತೆ ಕಾಣಿಸಿಕೊಂಡಿತು. ಅಲ್ಲದೆ, ಬೋನು ಇರಿಸಿರುವ ಸ್ಥಳಕ್ಕೆ ಹಾಗೂ ಸುತ್ತಲೂ ಓಡಾಟ ನಡೆಸದಂತೆ ಅರಣ್ಯ ಇಲಾಖೆಯ ಸಿಬ್ಬಂದಿ ಸೂಚಿಸಿದ್ದಾರೆ. ಅರಣ್ಯ ರಕ್ಷಕರಾದ ದಾವಲ್‌ಸಾಬ್, ಶಿವುಕುಮಾರ, ವೀಕ್ಷಕರಾದ ಈರಪ್ಪ ಹಾದಿಮನಿ, ಹನುಮಂತ, ರೈತರಾದ ಆನಂದಪ್ಪ ಕಂದಗಲ್, ಕನಕಪ್ಪ, ಛತ್ರಪ್ಪ, ವಿಜಯಕುಮಾರ ಇತರರಿದ್ದರು.