

ಕನಕಗಿರಿ: ಸಾರ್ವಜನಿಕರು ಗ್ರಾಪಂಗೆ ಭರಿಸಬೇಕಾದ ಮನೆ, ನಿವೇಶನ ಇತರ ತೆರಿಗೆಗಳನ್ನು ಸಕಾಲಕ್ಕೆ ಪಾವತಿಸುವುದರಿಂದ ಗ್ರಾಮಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗುತ್ತದೆ ಎಂದು ತಾಪಂ ಇಒ ಕೆ. ರಾಜಶೇಖರ ಹೇಳಿದರು.
ತಾಲೂಕಿನ ಸುಳೇಕಲ್, ಜೀರಾಳ ಹಾಗೂ ಚಿಕ್ಕಡಂಕನಕಲ್ ಗ್ರಾಮಗಳಲ್ಲಿ ಗುರುವಾರ ಕರವಸೂಲಿ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.
ತಾಲೂಕಿನ 11 ಗ್ರಾಪಂ ವ್ಯಾಪ್ತಿಯ ಗ್ರಾಮಗಳಲ್ಲಿ ಕರ ವಸೂಲಿ ವಿಶೇಷ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಎಲ್ಲ ಪಿಡಿಒಗಳು, ಕಾರ್ಯದರ್ಶಿಗಳು, ಕರವಸೂಲಿ ಸಿಬ್ಬಂದಿ ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಜನರ ಮನೆ-ಮನೆಗೆ ತೆರಳಿ ಶೇ.100 ಪ್ರಗತಿ ಸಾಧಿಸಲು ನಿರ್ದೇಶನ ನೀಡಲಾಗಿದೆ. ಪ್ರತಿಯೊಬ್ಬರು ಕರ ನೀಡಿದರೆ ಇದರಿಂದ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ ಎಂದರು. ಗ್ರಾಪಂ ಪಿಡಿಒಗಳಾದ ಈರಪ್ಪ ಗಟ್ಟೆಪ್ಪನವರ್, ಚಂದುಸ್ವಾಮಿ, ಹನುಮಂತಪ್ಪ ಇತರರಿದ್ದರು.