

ಕನಕಗಿರಿ: ಜಾತ್ರೆಯ ಸಂದರ್ಭದಲ್ಲಿ ಪಟ್ಟಣದ ಜನತೆ ಸೌಹಾರ್ದ ಹಾಗೂ ಸಾಮರಸ್ಯ ಹಾಳು ಮಾಡುವ ಉದ್ದೇಶವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲರೂ ಸೇರಿ ಕನಕಗಿರಿ ಉತ್ಸವ ಆಚರಿಸೋಣ ಎಂದಾಗ ತೀರ್ಮಾನ ಮಾಡೋಣ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.
ಇಲ್ಲಿನ ಕನಕಾಚಲ ದೇವಸ್ಥಾನದಲ್ಲಿ ಕನಕಗಿರಿ ಉತ್ಸವ ಆಚರಣೆ ನಿಮಿತ್ತ ಶುಕ್ರವಾರ ರಾತ್ರಿ ತುರ್ತುಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಜಾತ್ರೆಗೆ ಬರುವವರಿಗೆ ಉತ್ಸವದ ಸವಿರುಚಿ ಇರಲಿ ಎನ್ನುವ ಜತೆಗೆ ಪ್ರತಿ ವರ್ಷ ಜಾತ್ರೆಯಲ್ಲಿಯೇ ಉತ್ಸವ ಆಚರಿಸುವ ಪರಂಪರೆಗೆ ಮುಂದಾಗಿದ್ದೆ. ಈ ಹಿಂದೆ 50 ಲಕ್ಷದಲ್ಲಿಯೂ ಉತ್ಸವ ಆಗಿದೆ. 5 ಕೋಟಿಯಲ್ಲಿಯೂ ಉತ್ಸವ ನಡೆಯುತ್ತದೆ ಎಂದರು.
ಪಕ್ಷದವರೂ ಸಹ ಜಾತ್ರೆಯಲ್ಲಿ ಉತ್ಸವ ಬೇಡವೆಂದರೂ ಅವರ ಮನವೊಲಿಸಿದ್ದೆ. ಆದರೆ, ಊರ ಜನರ ಮನವೊಲಿಸಲು ಕಷ್ಟ. ಕೆಲವರು ಪಟ್ಟಣ ಬಂದ್ ಮಾಡುವುದು, ಪ್ರತಿಭಟನೆ ನಡೆಸುವುದಾಗಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಜನರ ಆಶೋತ್ತರಗಳ ವಿರುದ್ಧವಾಗಿ ಜಾತ್ರೆಯಲ್ಲಿ ಉತ್ಸವ ಆಚರಿಸುವುದರಿಂದ ಹಿಂದೆ ಸರಿದಿರುವೆ. ಇದರಲ್ಲಿ ಯಾರ ಸೋಲಿಲ್ಲ. ಯಾರ ಗೆಲುವಿಲ್ಲ ಎಂದರು.
ಗರುಡೋತ್ಸವ, ರಥೋತ್ಸವ ಸಂಭ್ರಮದಿಂದ ಮಾಡೋಣ. ಬಜೆಟ್‌ನಲ್ಲಿ ಕನಕಗಿರಿಗೆ 100 ಬೆಡ್ ಆಸ್ಪತ್ರೆ, ಕನಕಗಿರಿ, ಕಾರಟಗಿ ಪಟ್ಟಣಕ್ಕೆ ತುಂಗಭದ್ರಾ ನದಿಯಿಂದ ನೀರು ತರಲು 200 ಕೋಟಿ ರೂ. ಮಂಜೂರಾಗಿದೆ ಎಂದರು. ಸುದ್ದಿಗಾರರು ಬಜೆಟ್‌ನಲ್ಲಿ ಕನಕಗಿರಿಗೆ ಏನು ಕೊಡುಗೆ ಏನು ಎಂದು ಪ್ರಶ್ನಿಸಿದರು. ಆಗ ಸಚಿವರು, ಕೊಡುಗೆ ಕೊಡಲು ಮುಂದಾದರೂ ಜನರೇ ಪಡೆದುಕೊಳ್ಳಲು ಹಿಂಜರಿದಿದ್ದಾರೆ ಎಂದು ಮಾರ್ಮಿಕವಾಗಿ ಉತ್ಸವ ಮುಂದೂಡಿದೆ ಎಂದು ತಿಳಿಸಿದರು.