

ಕನಕಗಿರಿ: ಕನಕಾಚಲಪತಿ ಜಾತ್ರಾ ಮಹೋತ್ಸವದ ನಿಮಿತ್ತ ಶನಿವಾರ ಬೆಳಗ್ಗೆ ಗೋವಿಂದನ ನಾಮಸ್ಮರಣೆಯೊಂದಿಗೆ ಗರುಡೋತ್ಸವ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು.
ಬೆಳಗ್ಗೆ 4.15ಕ್ಕೆ ದೀಪಾಲಂಕಾರದಿಂದ ಕೂಡಿದ ಬೃಹತ್ ನೀಲಿಪಟವನ್ನು ಹೊತ್ತ ಗರುಡ ರಾಜಬೀದಿಯಲ್ಲಿ ಅದ್ದೂರಿಯಾಗಿ ಸಾಗಿತು. ದೇವಸ್ಥಾನದಿಂದ ಮೇಲುಗಡೆ ಹನುಮಪ್ಪ ದೇವಸ್ಥಾನದ ಬಳಿಯ ಪಾದಗಟ್ಟೆಗೆ ತಲುಪಿ ಸ್ವಸ್ಥಾನಕ್ಕೆ ಮರಳಿತು. ಸಾಂಪ್ರದಾಯಿಕ ಇಲಾಯಿ(ಪಂಜು)ಗಳ ಬೆಳಕಿನಲ್ಲಿ ಗರುಡೋತ್ಸವ ನಡೆಯಿತು. ಪಟ್ಟಣದ ಭಕ್ತರೊಬ್ಬರು ಕಲ್ಪಿಸಿದ್ದ ಬಣ್ಣ ಬಣ್ಣದ ಲೈಟ್‌ಗಳ ಬೆಳಕಿನ ಚಿತ್ತಾರ ಮೆರವಣಿಗೆಗೆ ಮತ್ತಷ್ಟು ಮೆರುಗು ನೀಡಿತು. ರಾಜಬೀದಿಯುದ್ದಕ್ಕೂ ಭಕ್ತರು ದೀವಟಿಗೆ ಹಿಡಿದು ಕರ್ಪೂರ ಹಾಗೂ ಕೊಬ್ಬರಿ ಸುಟ್ಟು ಭಕ್ತಿ ಸಮರ್ಪಿಸಿದರು. ಕೆಲವರು ಪಟಾಕಿ ಸಿಡಿಸಿ ಸ್ವಾಗತಿಸಿದರು.
ಶುಕ್ರವಾರ ರಾತ್ರಿ ಮೈಸೂರು ಸಂಸ್ಕೃತ ಶಾಲೆಯ ಆಗಮಿಕರು ಹಮ್ಮಿಕೊಂಡಿದ್ದ ಶ್ರೀದೇವಿ, ಭೂದೇವಿಯವರೊಂದಿಗೆ ಕನಕಾಚಲಪತಿಯ ಕಲ್ಯಾಣೋತ್ಸವ ಪಟ್ಟಣದಲ್ಲಿ ತಿರುಪತಿಯನ್ನೇ ಮರು ಸೃಷ್ಟಿ ಮಾಡಿದಂತಿತ್ತು. ತಹಸೀಲ್ದಾರ ರವಿ ಅಂಗಡಿ ಕುಟುಂಬದವರು ಕನ್ಯಾದಾನ ಮಾಡಿದರು. ಶಾಸಕ ಬಸವರಾಜ ದಢೇಸುಗೂರು, ಮಾಜಿ ಸಚಿವ ಶಿವರಾಜ ತಂಗಡಗಿ, ಮಾಜಿ ಶಾಸಕ ಪ್ರತಾಪಗೌಡ ಪಾಟೀಲ್, ಜಿಪಂ ಸದಸ್ಯ ಅಮರೇಶ ಗೋನಾಳ, ಪ್ರಮುಖರಾದ ಲಂಕೇಶ ಗುಳದಾಳ, ರೆಡ್ಡಿ ಶ್ರೀನಿವಾಸ, ದೇವಪ್ಪ ತೋಳದ, ರಮೇಶ ನಾಯಕ, ವೀರೇಶ ಸಮಗಂಡಿ ಇತರರಿದ್ದರು.