

ಕನಕಗಿರಿ: ಇಲ್ಲಿನ ಶ್ರೀ ಕನಕಾಚಲಪತಿ ಜಾತ್ರೆ ನಿಮಿತ್ತ ಸೋಮವಾರ ತಡರಾತ್ರಿ ಹನುಮಂತ್ಯೋತ್ಸವ ನೂರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯಿತು.
80 ಅಡಿಗೂ ಹೆಚ್ಚು ಎತ್ತರದ ಉಚ್ಚಾಯವನ್ನು ಜಾತ್ರಾ ಕಾರ್ಮಿಕರು ಬೆಳಗ್ಗೆಯಿಂದ ಸಾಂಪ್ರಾದಾಯಿಕವಾಗಿ ಸಿದ್ಧಪಡಿಸಿದ್ದರು. ತಡರಾತ್ರಿ 12.15ಕ್ಕೆ ಆರಂಭಗೊಂಡ ಉಚ್ಛಾಯದಲ್ಲಿ ಪಾಲ್ಗೊಂಡಿದ್ದ ಯುವಕರು ಸಂಭ್ರಮದಿಂದ ಕೇಕೆ, ಶಿಳ್ಳೆಯಾಕುತ್ತಾ ಎಳೆದು ಸಂಭ್ರಮಿಸಿದರು. ರಾಜಬೀದಿಯ ಇಕ್ಕೆಲಗಳಲ್ಲಿ ನಿಂತಿದ್ದ ಭಕ್ತ ಸಮೂಹ ಹನುಮಪ್ಪನಿಗೆ ಆರತಿ, ಹೂಮಾಲೆ ಭಕ್ತಿ ಭಾವ ಮೆರೆದರು. ಉತ್ಸವದ ಮುಂದೆ ಪಂಜು, ಭಾಜ, ಭಜಂತ್ರಿ ವಿವಿಧ ವಾದ್ಯ ಮೇಳಗಳು ಮೆರವಣಿಗೆಗೆ ಶೋಭೆ ತಂದವು.
ತೇರಿನ ಹನುಮಪ್ಪನಿಗೆ ಕನಕಾಚಲಪತಿ ದೇವಸ್ಥಾನದಿಂದ ವಿಶೇಷ ಪೂಜೆ ನಡೆಯಿತು. ಮೆರವಣಿಗೆಯುದ್ದಕ್ಕೂ ಯುವಕರಿಂದ ಜೈ ಶ್ರೀರಾಮ್, ಜೈ ಹನುಮಾನ್, ಲಕ್ಷ್ಮೀ ರಮಣ ಗೋವಿಂದ-ಗೋವಿಂದಾ ಘೋಷಣೆಗಳು ಮೊಳಗಿದವು.
ದೇವಸ್ಥಾನ ಕಾರ್ಯದರ್ಶಿ ಸಿದ್ದಲಿಂಗಯ್ಯಸ್ವಾಮಿ, ಸಮಿತಿ ಅಧ್ಯಕ್ಷ ನಾಗರಾಜ ತೆಗ್ಗಿಹಾಳ, ಸದಸ್ಯರಾದ ವೀರೇಶ ಕಡಿ, ಕೀರ್ತಿ ಸೋನಿ, ಅರ್ಚಕರಾದ ವೆಂಕಟ ಮಧುಸೂದನ, ಮಧುರಕವಿ, ಅರ್ಚಕ ಜನಾರ್ದನ, ಪ್ರಮುಖರಾದ ಬಿ. ಕನಕಪ್ಪ, ಕನಕರೆಡ್ಡಿ ಮಹಲಿನಮನಿ ಇತರರಿದ್ದರು.