

ಕನಕಗಿರಿ: ಪಟ್ಟಣದ ಐತಿಹಾಸಿಕ ಶ್ರೀ ಕನಕಾಚಲಪತಿ ಜಾತೆಗಾಗಿ 150 ಕಿಮೀ ದೂರದಿಂದ ಭಕ್ತರು ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ. ಧಾರವಾಡ ಜಿಲ್ಲೆ ಅಣ್ಣಿಗೇರಿ ತಾಲೂಕಿನ ಇಬ್ರಾಹಿಂಪುರ ಗ್ರಾಮದ 20 ಭಕ್ತರು ಕಾಲ್ನಡಿಗೆಯಲ್ಲಿ ಕನಕಗಿರಿಗೆ ಬಂದಿದ್ದಾರೆ.
ಶನಿವಾರ ಪಾದಯಾತ್ರೆ ಆರಂಭಿಸಿದ್ದು, ಮಂಗಳವಾರ ಬೆಳಗ್ಗೆ ಪಟ್ಟಣ ತಲುಪಿ ದೇವರ ದರ್ಶನ ಪಡೆದಿದ್ದಾರೆ. ಕಳೆದ 25 ವರ್ಷಗಳಿಂದ ಕನಕಾಚಲಪತಿಯ ಜಾತ್ರೆಗೆ ನಾವಿಬ್ಬರು ಪಾದಯಾತ್ರೆ ಮೂಲಕ ಬರುತ್ತಿದ್ದೇವೆ. ಕಳೆದ 10 ವರ್ಷಗಳಿಂದ ನಮ್ಮೊಂದಿಗೆ ಸ್ನೇಹಿತರು, ಸಂಬಂಧಿಕರು ಜತೆಯಾಗಿದ್ದಾರೆ ಎಂದು ಭಕ್ತರಾದ ಮುತ್ತಪ್ಪ ನಾಯ್ಕರ್, ಕನಕಪ್ಪ ನಾಯ್ಕರ್ ತಿಳಿಸಿದರು. ಪ್ರಮುಖರಾದ ಭೀಮಪ್ಪ ವಂಕನ್ನವರ್, ಸಿದ್ದಪ್ಪ ತಳವಾರ, ಕುಮಾರ ಜೋಗಿ, ಶಿವಾನಂದ ಜೋಗಿ, ಕಿಷ್ಟಪ್ಪ ಸಂದಿಮನಿ, ಫಕೀರಪ್ಪ ನಾಯ್ಕರ್, ಬಸನಪ್ಪ ಚಿಕ್ಕನರ್, ರಾಮಲಿಂಗ ನಾಯ್ಕರ್, ಬಸವರಾಜ ನಾಯ್ಕರ್, ಸತೀಶ ವಂಕಣ್ಣವರ್, ಈರಪ್ಪ ತಳವಾರ ಇತರರಿದ್ದರು.