

ಕನಕಗಿರಿ: ಬಡ ಹಾಗೂ ಮಧ್ಯಮ ವರ್ಗದ ಬ್ರಾಹ್ಮಣರು ಸ್ವ-ಉದ್ಯೋಗ ಕೈಗೊಳ್ಳಲು ಸ್ವಾವಲಂಬಿ ಯೋಜನೆಯಡಿ 2 ಲಕ್ಷ ರೂ. ಸಾಲ ಸೌಲಭ್ಯ ದೊರೆಯಲಿದೆ ಎಂದು ರಾಜ್ಯ ಬ್ರಾಹ್ಮಣ ಅಭಿವೃದ್ಧಿ ನಿಗಮದ ಅಧ್ಯಕ್ಷ ಜಯಸಿಂಹ ಅಸಗೋಡ ಹೇಳಿದರು.
ಇಲ್ಲಿನ ಶ್ರೀ ಕನಕಾಚಲ ದೇವಸ್ಥಾನ ಹಾಗೂ ರಾಘವೇಂದ್ರ ಮಠಕ್ಕೆ ಗುರುವಾರ ಭೇಟಿ ನೀಡಿ ದರ್ಶನ ಪಡೆದು, ಬಳಿಕ ಮಾತನಾಡಿದರು. ಬ್ರಾಹ್ಮಣ ಸಮುದಾಯದಲ್ಲಿ ಬಡ ಹಾಗೂ ಮಧ್ಯಮ ವರ್ಗದವರಿದ್ದಾರೆ.
ಅಂಥವರು ಸ್ವ-ಉದ್ಯೋಗ ಕೈಗೊಂಡು ಜೀವನ ಸಾಗಿಸಲು ನಿಗಮದಿಂದ 2 ಲಕ್ಷ ರೂ. ಸಾಲ ನೀಡಲಾಗುತ್ತಿದ್ದು, ಶೇ.20 ಸಬ್ಸಿಡಿ ದೊರೆಯಲಿದೆ. ಇನ್ನುಳಿದ ಮೊತ್ತಕ್ಕೆ ಶೇ.4 ಬಡ್ಡಿ ವಿಧಿಸಲಾಗುತ್ತದೆ.
ಸಾಲ ಪಡೆದವರು 32 ಕಂತುಗಳಲ್ಲಿ ಮರುಪಾವತಿಸಲು ಅವಕಾಶವಿದೆ. ಇನ್ನು ಐಎಎಸ್, ಕೆಎಎಸ್ ತರಬೇತಿ ಪಡೆವ ಬ್ರಾಹ್ಮಣ ವಿದ್ಯಾರ್ಥಿಗಳಿಗೆ 1 ಲಕ್ಷ ರೂ. ಸಹಾಯಧನ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್ ನೀಡುತ್ತಿದ್ದು, ಸಮುದಾಯದವರು ಈ ಯೋಜನೆಗಳ ಸದುಪಯೋಗಪಡಿಸಿಕೊಳ್ಳಬೇಕೆಂದರು.
ನಿಗಮದ ನಿರ್ದೇಶಕ ವೆಂಕಟೇಶ ಕುಲಕರ್ಣಿ, ಪಟ್ಟಣ ಪಂಚಾಯಿತಿ ಸದಸ್ಯರಾದ ನೂರಸಾಬ್ ಗಡ್ಡಿಗಾಲ, ಶರಣೇಗೌಡ ಪಾಟೀಲ್, ಅನಿಲ್ ಬಿಜ್ಜಳ, ಕಾಂಗ್ರೆಸ್ ನಗರ ಘಟಕದ ಅಧ್ಯಕ್ಷ ರವಿ ಪಾಟೀಲ್, ಪ್ರಮುಖರಾದ ಪ್ರಲ್ಹಾದರಾವ್ ಮಾದಿನಾಳ, ಕೆ.ಎಚ್.ಕುಲಕರ್ಣಿ, ಗುರುರಾಜ ಕುಲಕರ್ಣಿ, ಗೋಪಾಲರಾವ್ ಕುಲಕರ್ಣಿ, ಶ್ಯಾಮಸುಂದರ್, ಕೆ.ಗಣೇಶ ಇತರರಿದ್ದರು.