

ಕನಕಗಿರಿ: ಇಡೀ ದೇಶಕ್ಕೆ ಸ್ವಾತಂತ್ರೃ ಸಿಕ್ಕರೂ ಹೈದ್ರಾಬಾದ್ ನಿಜಾಮನ ಕಪಿಮುಷ್ಠಿಯಲ್ಲಿದ್ದ ಕಲ್ಯಾಣ ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಸ್ಥಾಪಿಸಲು ಮತ್ತೊಂದು ಹೋರಾಟ ಅನಿವಾರ್ಯವಾಯಿತು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಇಲ್ಲಿನ ಕೆಪಿಎಸ್ ಮೈದಾನದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಉತ್ಸವ ದಿನಾಚರಣೆ ನಿಮಿತ್ತ ಧ್ವಜಾರೋಹಣ ನೆರವೇರಿಸಿ ಮಾತನಾಡಿ, 1947ರ ಆ.15ರ ನಂತರ ಇಲ್ಲಿಯ ಜನರು ಮೀರ್ ಉಸ್ಮಾನ ಅಲಿ ಖಾನ್ ಆಡಳಿತಕ್ಕೆ ತತ್ತರಿಸಿ ಹೋಗಿದ್ದರು.
ಉರ್ದು ಕಡ್ಡಾಯವಾಗಿ ಕಲಿಯಬೇಕಿತ್ತು. ಕನ್ನಡ ಭಾಷೆಯನ್ನು ಕಡೆಗಣಿಸಲಾಗಿತ್ತು. ಜನರಿಗೆ ವಾಕ್ ಸ್ವಾತಂತ್ರವಿರಲಿಲ್ಲ. ಮೂಲಭೂತ ಹಕ್ಕುಗಳಿಂದ ವಂಚಿತರಾಗಿದ್ದರು ಎಂದರು.
ದೇಶಕ್ಕೆ ನಮ್ಮ ಭಾಗ ವಿಲೀನವಾಗಲು ಆಗಿನ ಗೃಹ ಸಚಿವ ಸರ್ದಾರ ವಲ್ಲಬಭಾಯ್ ಪಟೇಲ್ ಅವರ ಪಾತ್ರ ಪ್ರಮುಖವಾಗಿತ್ತು. ಜಮ್ಮು ಕಾಶ್ಮೀರದ ಅರಸ ಹರಿಸಿಂಗ್, ಜುನಾಗಡದ ಅರಸ ಮಹ್ಮದ್ ಮೊಹಾಬತ್ ಭಾರತದ ಒಕ್ಕೂಟಕ್ಕೆ ಸೇರಲು ಸಹಿ ಹಾಕಿದರು.
ಆದರೆ, ಹೈದ್ರಾಬಾದ್ ನಿಜಾಮನು ಒಪ್ಪಿಗೆ ನೀಡಲಿಲ್ಲ. ಇದರಿಂದ ಅನೇಕ ನಾಯಕರು ಹೋರಾಟಕ್ಕೆ ಧುಮುಕಿದರು. ಸ್ವಾಮಿ ರಮಾನಂದ ತೀರ್ಥರು, ಶಿವಮೂರ್ತಿಸ್ವಾಮಿ ಅಳವಂಡಿ, ಭತ್ತದ ಮರಿಯಪ್ಪ ನಿಜಾಮನ ಆಡಳಿತಕ್ಕೆ ಪೂರ್ಣವಿರಾಮ ಹಾಕಲು ನಿರ್ಧರಿಸಿದರು.
ಭಾರತದ ಉಕ್ಕಿನ ಮನುಷ್ಯ ಸರ್ಧಾರ ವಲ್ಲಭಾಯ್ ಪಟೇಲರು ಆಪರೇಷನ್ ಪೋಲೋ ಮಿಲಿಟರಿ ಕಾರ್ಯಚರಣೆ ಫಲವಾಗಿ 1948 ಸೆಪ್ಟಂಬರ್ 17 ರಂದು ವಿಮೋಚನೆಗೊಂಡಿತು ಎಂದು ವಿವರಿಸಿದರು.
ಉಪನ್ಯಾಸಕ ಶಿವಪುತ್ರಪ್ಪ ಗಳಪೂಜೆ ಉಪನ್ಯಾಸ ನೀಡಿದರು. ಪಪಂ ಅಧ್ಯಕ್ಷೆ ಹುಸೇನಬೀ ಚಳ್ಳಮರದ, ಸದಸ್ಯರಾದ ಅನಿಲ್‌ಕುಮಾರ ಬಿಜ್ಜಳ, ಶೇಷಪ್ಪ ಪೂಜಾರ, ತಾಪಂ ಇಒ ರಾಜಶೇಖರ, ಸಿಡಿಪಿಒ ವಿರೂಪಾಕ್ಷಿ, ಖಜಾನಾಧಿಕಾರಿ ದುರ್ಗಾಸಿಂಗ್, ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಶಿಕ್ಷಣ ಸಂಯೋಜಕ ಆಂಜನೇಯ ಇತರರಿದ್ದರು.