

ಕನಕಗಿರಿ: ತಾಲೂಕಿನ ವಡಕಿ ಗ್ರಾಮದಲ್ಲಿ ಜೆಜೆಎಂ ಪೈಪ್‌ಲೈನ್ ಅಳವಡಿಕೆಗಾಗಿ ಕೆಲ ತಿಂಗಳ ಹಿಂದೆ ಅಗೆಯಲಾಗಿದ್ದ ಗುಂಡಿಯಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಗ್ರಾಮಸ್ಥರು ಸಾಂಕ್ರಾಮಿಕ ರೋಗದ ಭೀತಿಯಲ್ಲಿದ್ದಾರೆ.
ಚರಂಡಿ ನೀರು ಪಾಚಿಗಟ್ಟಿದೆ. ಸೊಳ್ಳೆ, ನೊಣಗಳ ಕಾಟ ಹೆಚ್ಚಾಗಿದೆ. ಕೊಳಚೆ ನೀರಿನಿಂದ ದುರ್ವಾಸನೆ ಬೀರುತ್ತಿದ್ದು, ಮೂಗು ಮುಚ್ಚಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಗ್ರಾಮಸ್ಥರಿಗೆ ಸಾಂಕ್ರಾಮಿಕ ರೋಗದ ಆತಂಕ ಕಾಡತೊಗಿದ್ದು, ಗ್ರಾಮಸ್ಥರ ಮನವಿಗೆ ಪಿಡಿಒ, ಗ್ರಾಪಂ ಸದಸ್ಯರು ಸ್ಪಂದಿಸಿಲ್ಲ.
ಗ್ರಾಮದ ಸ್ವಚ್ಛತೆಗೆ ತಾಪಂ ಇಒ ರಾಜಶೇಖರ ಅವರು ಪಿಡಿಒ ನಾಗಲಿಂಗಪ್ಪಗೆ ನೋಟಿಸ್ ನೀಡಿದರೂ ಕ್ರಮ ಕೈಗೊಳ್ಳದಿರುವುದು ಅಧಿಕಾರಿಗಳ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿಯಾಗಿದೆ. ಅರೆಬರೆ ಕಾಮಗಾರಿ ಮಾಡಿರುವ ಗುತ್ತಿಗೆದಾರರು ಬಿಲ್ ಎತ್ತುವಳಿ ಮಾಡಿಕೊಂಡಿದ್ದು, ವಾಪಸ್ ಗ್ರಾಮದ ಕಡೆ ಸುಳಿದಿಲ್ಲ. ರೋಗಗಳ ಗೂಡಾಗಿರುವ ಗ್ರಾಮದ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸಾಮಾಜಿಕ ಕಾರ್ಯಕರ್ತ ಲಕ್ಷ್ಮೀಕಾಂತ ಬೊಮ್ಮನಾಳ ಆಗ್ರಹಿಸಿದ್ದಾರೆ.