

ಕನಕಗಿರಿ: ಸಾಮಾಜಿಕ ಸೇವೆ ಹಾಗೂ ಮಾನವ ಕಳಕಳಿಯುಳ್ಳ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಶ್ರೀಗಳು ಯುವಕರನ್ನು ಸ್ಫೂರ್ತಿಗೊಳಿಸಲು ನನ್ನಂಥವರನ್ನು ಗುರುತಿಸಿ ತಮ್ಮ ಮುಂದೆ ನಿಲ್ಲಿಸಿದ್ದಾರೆ ಎಂದು ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಹೇಳಿದರು.
ಇಲ್ಲಿನ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದಲ್ಲಿ ಬಸವ ಜಯಂತಿ ನಿಮಿತ್ತ ನಡೆಯುತ್ತಿರುವ ಪರಿಪೂರ್ಣದೆಡೆಗೆ ಪ್ರವಚನ ಹಾಗೂ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಮಂಗಳವಾರ ಮಾತನಾಡಿದರು.
ನಾನು ಹಲವು ಶಾಲೆ ಕಾಲೇಜುಗಳ ಕಾರ್ಯಕ್ರಮದಲ್ಲಿ ಭಾಗವಹಿಸಿ ಲಕ್ಷಾಂತರ ವಿದ್ಯಾರ್ಥಿಗಳ ಮುಂದೆ ನನ್ನ ಕಲೆ ಪ್ರದರ್ಶಿಸಿದ್ದೇನೆ. ಸಾಧನೆಗೆ ಕೀಳರಿಮೆ ಇರಬಾರದು. ಅಂಧನಾಗಿದ್ದರೂ ನನ್ನಲ್ಲಿರುವ ಕಲೆ ಗುರುತಿಸಿ ಶ್ರೀಗಳು ತಮ್ಮ ಮುಂದೆ ನಿಲ್ಲಿಸಿ ಇತರರಿಗೆ ಪ್ರೋತ್ಸಾಹಿಸುವ ಕೆಲಸ ಮಾಡುತ್ತಿದ್ದಾರೆ ಎಂದರು.
ಅರಳಹಳ್ಳಿಯ ಗವಿಸಿದ್ದಯ್ಯ ತಾತ ಮಾತನಾಡಿ, ತಮಗಾಗಿ, ಮಠಕ್ಕಾಗಿ ಏನನ್ನೂ ಬೇಡದೇ ಸಮಾಜ ಸುಧಾರಿಸಲಿಕ್ಕೆ ಅವಶ್ಯವಾದ ಯುವಕರು, ಭಕ್ತರಲ್ಲಿನ ದುಶ್ಚಟಗಳನ್ನು ಬಿಡಿಸುವುದಕ್ಕಾಗಿ ತಾಲೂಕಿನಾದ್ಯಂತ ಜೋಳಿಗೆ ಹಿಡಿದು ಸಂಚಾರ ಮಾಡಿ ದುಶ್ಚಟಗಳ ಭೀಕ್ಷೆ ಬೇಡಿದ ಸಂಸ್ಥಾನ ವಿರಕ್ತಮಠದ ಶ್ರೀಗಳ ಕಾರ್ಯ ಶ್ಲಾಘನೀಯ. ಸಮಾಜ ಸೇವೆಯಲ್ಲಿ ಕನಕಗಿರಿ ಮಠವು ಉತ್ತುಂಗಸ್ಥಾನದಲ್ಲಿದೆ. ಕಣ್ಣಿದ್ದವರು ಕನಕಗಿರಿ ನೋಡಬೇಕೆನ್ನುವ ಮಾತು ಮುಂದೆ ಕಣ್ಣಿದ್ದವರು ಚನ್ನಮಲ್ಲಸ್ವಾಮಿಗಳನ್ನು ನೋಡಬೇಕು ಎಂದರೆ ತಪ್ಪಾಗಲಾರದು ಎಂದರು.
ಪಟ್ಟಾಧಿಕಾರದ 25ನೇ ವರ್ಷ ಪೂರೈಸಿದ ಅಮೀನಗಡ ಗಚ್ಚಿನಮಠದ ಶಂಕರ ರಾಜೇಂದ್ರ ಸ್ವಾಮೀಜಿ, ಕಮತಗಿ ಹುಚ್ಚೇಶ್ವರ ಸಂಸ್ಥಾನಮಠದ ಹುಚ್ಚೇಶ್ವರ ಸ್ವಾಮೀಜಿಯನ್ನು ಶ್ರೀಮಠದಿಂದ ಸತ್ಕರಿಸಲಾಯಿತು.
2023-24ನೇ ಸಾಲಿನ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ವಿರೂಪಾಕ್ಷರೆಡ್ಡಿ ಓಣಿಮನಿ, ಅರಣ್ಯ ಇಲಾಖೆ ಪ್ರಶಸ್ತಿ ಪುರಸ್ಕೃತ ಈರಪ್ಪ ಹಾದಿಮನಿ, ಮಾನವ ಕಂಪ್ಯೂಟರ್ ಖ್ಯಾತಿಯ ಬಸವರಾಜ ಉಮರಾಣಿ ಅವರಿಗೆ ಗುರು ರಕ್ಷೆ ನೀಡಲಾಯಿತು. ಪೌರ ಕಾರ್ಮಿಕರನ್ನು ಗೌರವಿಸಲಾಯಿತು.
ಮಹಾರಾಷ್ಟ್ರದ ಅಚಲೇರಿ ಸಂಸ್ಥಾನ ಹಿರೇಮಠದ ಶ್ರೀ ಸೂತ್ರೇಶ್ವರ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆ ವಹಿಸಿದ್ದರು. ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚನ್ನಮಲ್ಲ ಸ್ವಾಮೀಜಿ, ಹುನಗುಂದದ ಅಮರೇಶ್ವರ ದೇವರು ಇತರರಿದ್ದರು.