ಹುಲಸನಹಟ್ಟಿ ಸ್ಕೂಲ್‌ನಲ್ಲಿ 8ನೇ ತರಗತಿ ಆರಂಭ

kanakagiri school upgradation
ಕನಕಗಿರಿ ತಾಲೂಕಿನ ಹುಲಸನಹಟ್ಟಿ ಶಾಲೆ ಹೊರನೋಟ.
Published on

ಕನಕಗಿರಿ: ತಾಲೂಕಿನ ಹುಲಸನಹಟ್ಟಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 7ನೇ ತರಗತಿಯಿಂದ 8ನೇ ತರಗತಿಗೆ ಉನ್ನತೀಕರಣಗೊಳಿಸಿ ಡಿಡಿಪಿಐ ಶ್ರೀಶೈಲ ಬಿರಾದಾರ ಜೂ.2ರಂದು ಆದೇಶ ಹೊರಡಿಸಿದ್ದಾರೆ.

1961ರಲ್ಲಿ ಆರಂಭವಾದ ಈ ಶಾಲೆಯಲ್ಲಿ ಪ್ರಸ್ತುತ 1ರಿಂದ 7ನೇ ತರಗತಿ ನಡೆಯುತ್ತಿದ್ದು, 210 ವಿದ್ಯಾರ್ಥಿಗಳು ಓದುತ್ತಿದ್ದಾರೆ. 7ನೇ ತರಗತಿ ಉತ್ತೀರ್ಣಗೊಂಡ 31ವಿದ್ಯಾರ್ಥಿಗಳು 8ನೇ ತರಗತಿ ಶಿಕ್ಷಣಕ್ಕಾಗಿ ಹತ್ತಿರದ ಶಾಲೆಗಳಿಗೆ ತೆರಳಬೇಕಿತ್ತು. ಆದರೆ, ಹತ್ತಿರದಲ್ಲಿ ಯಾವುದೇ ಶಾಲೆಗಳಿಲ್ಲದಿದ್ದರಿಂದ ಹಲವು ವಿದ್ಯಾರ್ಥಿಗಳು ಮುಂದಿನ ಶಿಕ್ಷಣದಿಂದ ವಂಚಿತರಾಗುವ ಸಾಧ್ಯತೆಯಿತ್ತು. ಅದರಲ್ಲೂ ವಿದ್ಯಾರ್ಥಿನಿಯರನ್ನು ಪಾಲಕರು ಬೇರೆಡೆಗೆ ಕಳುಹಿಸಲು ಹಿಂದೇಟು ಹಾಕುವುದರಿಂದ ಅವರ ಶಿಕ್ಷಣ ಮೊಟಕುಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಆರ್‌ಟಿಇ ನಿಯಮದ ಪ್ರಕಾರ ಪ್ರಸಕ್ತ ಶಾಲೆಯಲ್ಲಿಯೇ 8ನೇ ತರಗತಿ ಆರಂಭಿಸಲು ಡಿಡಿಪಿಐ ಶ್ರೀಶೈಲ ಬಿರಾದಾರ ಅವರು, ಕ್ಷೇತ್ರ ಶಿಕ್ಷಣಾಧಿಕಾರಿಗಳ ಪ್ರಸ್ತಾವನೆ ಹಿನ್ನೆಲೆಯಲ್ಲಿ ಪ್ರಸಕ್ತ ವರ್ಷದಿಂದಲೇ ಜಾರಿಗೆ ಬರುವಂತೆ 8ನೇ ತರಗತಿಗೆ ಉನ್ನತೀಕರಿಸಿ ಆದೇಶಿಸಿದ್ದಾರೆ.

ಇದರಿಂದ ನಮ್ಮ ಮಕ್ಕಳ ಜತೆಗೆ ಪಕ್ಕದ ಚಿಕ್ಕತಾಂಡಾ, ಇಂಗಳದಾಳ, ಪರಾಪುರ ಗ್ರಾಮದ ವಿದ್ಯಾರ್ಥಿಗಳಿಗೂ ಸಹಕಾರಿಯಾಗಲಿದೆ ಎಂದು ಪಾಲಕರು ಸಂತಸ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net