ಮುಷ್ಕರವೆಂದು ರಜೆ ನೀಡಿದ ವಾರ್ಡನ್‌ಗಳು?: ಹಾಸ್ಟೆಲ್‌ಗಳಿಗೆ ಅಧಿಕಾರಿಗಳ ಭೇಟಿ, ವಿದ್ಯಾರ್ಥಿಗಳ ವಿಚಾರಣೆ

2knk3
Published on

ಕನಕಗಿರಿ: ಮುಷ್ಕರ ಹಿನ್ನೆಲೆಯಲ್ಲಿ ಮಾ.1ರಿಂದ ರಜೆಯಿದೆ ಎಂದು ವಾರ್ಡನ್‌ಗಳು ಹಾಸ್ಟೆಲ್ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದಾರೆಂಬ ಆರೋಪ ಕೇಳಿಬಂದಿದ್ದರಿಂದ ಅಧಿಕಾರಿಗಳು ವಸತಿ ನಿಲಯಕ್ಕೆ ಭೇಟಿ ನೀಡಿ ಪರಿಶೀಲಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ತಾಲೂಕು ವಿಸ್ತರಣಾಧಿಕಾರಿ ಉಷಾ ಮುಜುಂದಾರ್ ಹಾಗೂ ಮ್ಯಾನೇಜರ್ ಸುರೇಶ್ ಉದ್ದನವರ್ ಭೇಟಿ ನೀಡಿ, ಮೆಟ್ರಿಕ್ ಪೂರ್ವ ಬಾಲಕಿಯರ ವಸತಿ ನಿಲಯದಲ್ಲಿ ವಿದ್ಯಾರ್ಥಿನಿಯರನ್ನು ವಿಚಾರಿಸಿದರು. ಶಾಲೆಗೆ ರಜೆಯಿದೆ ಎಂದು ಮಂಗಳವಾರವೇ ನಮ್ಮನ್ನು ಕಳುಹಿಸಿದ್ದಾರೆ ಎಂದು ತಿಳಿಸಿದ್ದಾರೆ.

ಮೇಲಧಿಕಾರಿಗಳು ಪರಿಶೀಲನೆಗೆ ಬರುತ್ತಾರೆಂದು ವಾರ್ಡನ್ ಹಾಗೂ ಸಿಬ್ಬಂದಿ, ವಿದ್ಯಾರ್ಥಿಗಳ ಪಾಲಕರಿಗೆ ಕರೆ ಮಾಡಿ ಮಕ್ಕಳನ್ನು ಕರೆಯಿಸಿಕೊಂಡಿದ್ದಾರೆ. ಇದರಿಂದ ವಸತಿ ನಿಲಯದ 75 ವಿದ್ಯಾರ್ಥಿನಿಯರ ಪೈಕಿ 20 ಮಕ್ಕಳು ಮಾತ್ರ ಮರಳಿ ಬಂದಿದ್ದಾರೆ. ಇನ್ನು ಮೆಟ್ರಿಕ್ ನಂತರದ ವಸತಿ ನಿಲಯದಲ್ಲಿಯೂ ಹಲವು ವಿದ್ಯಾರ್ಥಿನಿಯರು ಊರಿಗೆ ತೆರಳಿರುವುದು ಅಧಿಕಾರಿಗಳ ಗಮನಕ್ಕೆ ಬಂದಿದ್ದು, ಜಂಟಿ ನಿರ್ದೇಶಕರು ವರದಿ ಕಳುಹಿಸುವಂತೆ ಇಒ ಉಷಾಗೆ ಕರೆ ಮಾಡಿ ಸೂಚಿಸಿದರು.

ಸಮಾಜ ಕಲ್ಯಾಣ ಇಲಾಖೆಯ ಕೆಲ ಹಾಸ್ಟೆಲ್‌ಗಳಲ್ಲಿಯೂ ವಿದ್ಯಾರ್ಥಿಗಳನ್ನು ಮನೆಗೆ ಕಳುಹಿಸಿದ್ದು, ಅಧಿಕಾರಿಗಳು ಪರಿಶೀಲನೆ ನಡೆಸಬೇಕೆಂದು ಅಮರೇಶ ಕಡಗದ ಒತ್ತಾಯಿಸಿದರು. ತಾಲೂಕು ಅಧ್ಯಕ್ಷ ನೀಲಕಂಠ ಬಡಿಗೇರ, ವಾರ್ಡನ್ ಹುಸೇನ್‌ಬಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net