

ಕನಕಗಿರಿ: ಐತಿಹಾಸಿಕ ಶ್ರೀ ಕನಕಾಚಲಪತಿ ಜಾತ್ರೆ ನಿಮಿತ್ತ ಸಹಸ್ರಾರು ಭಕ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ರಥೋತ್ಸವ ಶುಕ್ರವಾರ ಜರುಗಿತು.
ಬೆಳಗ್ಗೆ ದೇವಸ್ಥಾನದಲ್ಲಿ ವಿಶೇಷ ಪೂಜೆ, ಹವನಾದಿಗಳು ನಡೆದವು. ಮೂಲಾ ನಕ್ಷತ್ರದಲ್ಲಿ ಸಂಜೆ 4.15ರ ಸುಮಾರಿಗೆ ಆರಂಭಗೊಂಡ ರಥೋತ್ಸವವು 5.45ಕ್ಕೆ ಸ್ವಸ್ಥಾನ ತಲುಪಿತು. ರಥೋತ್ಸವಕ್ಕೆ ಬಂದಿದ್ದ ಭಕ್ತರಿಂದಲೇ ರಾಜಬೀದಿ ತುಂಬಿಕೊಂಡಿತ್ತು. ರಾಜಬೀದಿಯ ಇಕ್ಕೆಲಗಳಲ್ಲಿನ ಮನೆ, ಮಹಡಿಗಳ ಛಾವಣಿಗಳ ಮೇಲೆ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ರಥೋತ್ಸವ ವೀಕ್ಷಣೆಗೆ ನಿಂತಿದ್ದರು. ರಥವನ್ನು ಎಳೆಯುತ್ತಿದ್ದ ಭಕ್ತರು ಗೋವಿಂದಾ... ಗೋವಿಂದಾ ಎಂದು ದೇವರ ನಾಮಸ್ಮರಣೆಯೊಂದಿಗೆ ಸಂಭ್ರಮಿಸಿದರು.
ರಥವು ತೇರಿನ ಹನಮಪ್ಪ ದೇವಸ್ಥಾನದ ಕಲ್ಲುಕಂಬದ ಬಳಿ ತೆರಳುತ್ತಿದ್ದಂತೆ ಸುವರ್ಣಗಿರಿ ಸಂಸ್ಥಾನ ವಿರಕ್ತಮಠದ ಡಾ.ಚೆನ್ನಮಲ್ಲಸ್ವಾಮಿಗಳು ಪೂಜೆ ಸಲ್ಲಿಸಿದರು. ಹಲವು ಕಡೆಗಳಲ್ಲಿ ರಥೋತ್ಸವ ಸಂದರ್ಭದಲ್ಲಿ ಮಜ್ಜಿಗೆ, ನೀರು, ಪಾನಕ ವಿತರಿಸಲಾಯಿತು.
ರಥಕ್ಕೆ ಆಧುನಿಕ ತಂತ್ರಜ್ಞಾನ ಬಳಸಿ ಹೈಡ್ರಾಲಿಕ್ ವ್ಯವಸ್ಥೆ ಮಾಡಿದ್ದರಿಂದ ಅನುಕೂಲವಾಗಿದೆ. ಈ ಮುಂಚೆ ರಥೋತ್ಸವದ ಸಂಪ್ರದಾಯಕ್ಕೆ ವಿರುದ್ಧವಾಗಿ ರಥವು ಸಿಲುಕಿದರೆ, ನಿಂತರೆ ಜೆಸಿಬಿ, ಟ್ರಾೃಕ್ಟರ್‌ಗಳನ್ನು ಬಳಸಿ ಎಳಸಿ ಸ್ವಸ್ಥಾನ ಸೇರಿಸಲಾಗುತ್ತಿತ್ತು. ಆದರೆ, ಈ ವರ್ಷದ ರಥೋತ್ಸವದಲ್ಲಿಯೂ ಯಂತ್ರಗಳ ಬಳಕೆಗೆ ಅವಕಾಶ ನೀಡದೇ ಭಕ್ತರೇ ಎಳೆದು ಸ್ವಸ್ಥಾನ ತಲುಪಿಸಿದರು.
ಜಾತ್ರೆ ಆಗಮಿಸುವ ಭಕ್ತರಿಗೆ ದೇವಸ್ಥಾನ ಸಮಿತಿವತಿಯಿಂದ ಗುರುವಾರ ಹಾಗೂ ಶುಕ್ರವಾರ ಎರಡು ದಿನಗಳ ಕಾಲ ದಾಸೋಹ ವ್ಯವಸ್ಥೆ ಮಾಡಲಾಗಿದೆ. ಶುಕ್ರವಾರ ಭಕ್ತರಿಗಾಗಿ ರೊಟ್ಟಿ, ಪಲ್ಯ, ಅನ್ನ-ಸಾಂಬರ್ ಹುಗ್ಗಿ ವ್ಯವಸ್ಥೆ ಮಾಡಲಾಗಿತ್ತು. ಸಾವಿರಾರು ಭಕ್ತರು ಪ್ರಸಾದ ಸೇವಿಸಿದರು.
ಬಾಳೆಹಣ್ಣಿನ ಮೇಲೆ ‘ರೈತರಿಗೆ ಕನ್ಯಾ ಕೊಡ್ರಿ’ಎಂದು ಬರೆದು ಯುವ ರೈತನೊಬ್ಬರಥಕ್ಕೆ ಎಸೆದಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಯಿತು.
ಪ್ರಸಕ್ತ ವರ್ಷದ ಜಾತ್ರೆಯಲ್ಲಿ ರಥಕ್ಕೆ ಬಾಳೆಹಣ್ಣು ಎಸೆಯುವುದನ್ನು ನಿಷೇಧಿಸುವ ಮೂಲಕ ಸ್ವಚ್ಛತೆ ಕಾಪಾಡುವ, ಪಿಪಿ ಊದುವ ಮೂಲಕ ಜಾತ್ರೆಯಲ್ಲಿ ಸುಖಾಸುಮ್ಮನೇ ಭಕ್ತರಿಗೆ ಆಗುತ್ತಿದ್ದ ತೊಂದರೆಯನ್ನು ತಪ್ಪಿಸಲು ವ್ಯವಸ್ಥಾಪನಾ ಸಮಿತಿ ನಿರ್ಧಾರ ಕೈಗೊಂಡಿತ್ತು. ಆದರೆ, ಕೈಗೊಂಡ ನಿರ್ಧಾರ ಜಾತ್ರೆಯಲ್ಲಿ ಪಾಲನೆಯಾಗಲಿಲ್ಲ. ಯುವಕರು ಪಿಪಿ ಊದುವ ಮೂಲಕ ನೆರೆದಿದ್ದ ಭಕ್ತರಿಗೆ ತೊಂದರೆ ನೀಡಿದರು. ಸಾರ್ವಜನಿಕರಿಗೆ ತೊಂದರೆಯಾಗುವುದನ್ನು ಕಂಡ ಪಿಐ ಎಂ.ಡಿ ಫೈಜುಲ್ಲಾ ಹಾಗೂ ಪೊಲೀಸರು ಲಾಠಿ ರುಚಿ ತೋರಿಸಿದರು. ಯಾರ ಅಂಜಿಕೆಯೂ ಇಲ್ಲದೇ ಬಾಳೆಹಣ್ಣು ಮಾರಾಟ, ತೇರಿಗೆ ಎಸೆಯುವುದು ಸಾಮಾನ್ಯವಾಗಿತ್ತು.