

ಕನಕಗಿರಿ: ತಾಲೂಕಿನ ಹಿರೇಖೇಡದ ಜಮೀನೊಂದರಲ್ಲಿ ಬೆಳೆದಿದ್ದ ವಾಣಿಜ್ಯ ಬೆಳೆ ಕಲ್ಲಂಗಡಿ ಹೊಲಕ್ಕೆ ಕರಡಿ ನುಗ್ಗಿ ಅಪಾರ ಪ್ರಮಾಣ ಹಣ್ಣುಗಳನ್ನು ತಿಂದು ನಾಶಮಾಡಿದೆ.
ಗ್ರಾಮದ ರಾಮಣ್ಣ ಹೊಸಗೇರಿ ಎಂಬುವರು 2 ಎಕರೆಯಲ್ಲಿ ಬೆಳೆದಿದ್ದ ಬೀಜದ ಕಲ್ಲಂಗಡಿ ಹೊಲಕ್ಕೆ ಈಚೆಗೆ ಕರಡಿಯೊಂದು ನುಗ್ಗಿ ಬೆಳೆ ಹಾಳು ಮಾಡಿತ್ತು. ಈ ಸಂಕಷ್ಟದಿಂದ ರೈತ ಹೊರಬರುವ ಮುನ್ನವೇ ಗುರುವಾರ ಬೆಳಗಿನಜಾವ ಮತ್ತೆ ಲಗ್ಗೆ ಇಟ್ಟಿದ್ದು, 150ಕ್ಕೂ ಹೆಚ್ಚು ಹಣ್ಣುಗಳನ್ನು ತಿಂದು ಹಾಳು ಮಾಡಿದೆ.
ಫಸಲು ಕೈಸೇರುವ ವೇಳೆ ಕರಡಿಗಳು ದಾಳಿ ಮಾಡಿದ್ದರಿಂದ ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ತೋಟಗಾರಿಕೆ ಇಲಾಖೆ ಅಧಿಕಾರಿಗಳು ಬೆಳೆ ಪರಿಶೀಲಿಸಿ ನಷ್ಟ ಭರಿಸಬೇಕೆಂದು ರೈತ ರಾಮಣ್ಣ ಕೋರಿಕೊಂಡಿದ್ದಾರೆ.
ಕರಡಿ ದಾಳಿಯಿಂದ ಬೆಳೆ ಹಾನಿಯಾದವರು ಅರ್ಜಿ ಸಲ್ಲಿಸಿದರೆ ನಾವು ಸ್ಥಳ ಪರಿಶೀಲನೆ ನಡೆಸುತ್ತೇವೆ. ನಿಯಮದಂತೆ ಸರ್ಕಾರದಿಂದ ಪರಿಹಾರ ದೊರೆಯಲಿದೆ.
ಶಿವಕುಮಾರ ವಾಲಿ, ಗಸ್ತು ಅರಣ್ಯ ಪಾಲಕ