

ಕನಕಗಿರಿ: ವಿದ್ಯಾರ್ಥಿಗಳು ಪರಿಶ್ರಮದಿಂದ ಓದಿ ಉನ್ನತ ಹುದ್ದೆ ಪಡೆಯುವ ಮೂಲಕ ಪಾಲಕರ ಪ್ರೀತಿಗೆ ಪಾತ್ರರಾಗಬೇಕು ಎಂದು ರಾಯಚೂರು ವಿವಿ ಬೀಜ ವಿಜ್ಞಾನ ಮತ್ತು ತಾಂತ್ರಿಕ ಕೃಷಿ ವಿಜ್ಞಾನ ಸಹ ಪ್ರಾಧ್ಯಾಪಕ ಡಾ.ವಿಜಯಕುಮಾರ ಕುರನಳಿಕರ್ ಹೇಳಿದರು.
ಪಟ್ಟಣದ ಶ್ರೀ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 2024-25ನೇ ಸಾಲಿನ ಪಠ್ಯೇತರ ಚಟುವಟಿಕೆ, ಬಿಎಸ್ಸಿ ಕೋರ್ಸ್ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದಲ್ಲಿ ಮಾತನಾಡಿದರು.
ಗ್ರಾಮೀಣ ಭಾಗದ ಬಹುತೇಕರು ರೈತರ ಮಕ್ಕಳಾಗಿರುತ್ತಾರೆ. ರೈತರು ಎನ್ನುವ ಕೀಳರಿಮೆ ತೋರದೆ ಉನ್ನತ ಹುದ್ದೆ ಪಡೆಯಬೇಕು. ವೈದ್ಯ, ವಕೀಲ, ಬ್ಯಾಂಕಿಂಗ್ ಸೇರಿ ಯುಪಿಎಸ್ಸಿಯಲ್ಲೂ ಸಾಧನೆ ಮಾಡಿರುವ ಉದಾಹರಣೆಗಳಿವೆ. ಸಮಾಜದಲ್ಲಿ ಸಂವಹನ, ಚರ್ಚೆಗಳು, ಹೊಸ ವಿಚಾರಗಳು, ಆತ್ಮವಿಶ್ವಾಸ ವಿದ್ಯಾರ್ಥಿ ಜೀವನಕ್ಕೆ ಮುಖ್ಯ.
ಪ್ರಾಚಾರ್ಯ ಬಜರಂಗ ಬಲಿ ಮಾತನಾಡಿ, ಗ್ರಾಮಗಳಲ್ಲಿ ವಿಜ್ಞಾನ ವಿಭಾಗ ಆರಂಭಿಸಬೇಕೆಂಬ ಯೋಜನೆ ಬಂದಾಗ ಮೊದಲು ಪತ್ರಿಕೋದ್ಯಮ ವಿಭಾಗ ಆರಂಭಿಸಲಾಯಿತು. ಪ್ರಸಕ್ತ ವರ್ಷ ಸಚಿವರ ಆಸೆಯಂತೆ ಕಾಲೇಜಿನಲ್ಲಿ ವಿಜ್ಞಾನ ವಿಭಾಗ ಆರಂಭಿಸಲಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳಿಗೆ ಬಿಎಸ್ಸಿ ಕಲಿಯಲು ಸಹಕಾರಿಯಾಗಲಿದೆ ಎಂದರು.
ಪ್ರಾಧ್ಯಾಪಕರಾದ ಮರ್ವಿನ್ ಡಿಸೋಜ, ಡಾ.ಕೆ.ವೀರೇಶ್, ಎನ್.ಲಲಿತಾ ಕಿನ್ನಾಳ, ಡಾ.ಆಶಿಕಾ, ಟಿ.ಆರ್. ಸರ್ವಮಂಗಳಮ್ಮ, ಎ.ರಕ್ಷಿತ್, ಉಪನ್ಯಾಸಕರಾದ ಗೋಪಾಲ ರೆಡ್ಡಿ, ಬಾಳಪ್ಪ ಸುಳೇಕಲ್, ಮಾರುತೇಶ, ಸೋಮಶೇಖರ, ರವಿಕುಮಾರ್, ಮಂಜುನಾಥ, ವೀರೇಶ, ಎಸ್.ಕೆ.ಖಾದ್ರಿ, ದೇವೇಂದ್ರಪ್ಪ, ಬಸವರಾಜ ಇತರರಿದ್ದರು.