

ಕನಕಗಿರಿ: ಭಾರಿ ಗಾಳಿ, ಗುಡುಗು ಸಿಡಿಲು ಸಹಿತ ಗುರುವಾರ ಸಂಜೆ ಪಟ್ಟಣ ಸೇರಿ ಇತರೆಡೆ ಮಳೆಯಾಯಿತು. ಮಧ್ಯಾಹ್ನದಿಂದಲೇ ಮೋಡಕವಿದ ವಾತಾವರಣವಿತ್ತು. ಸಂಜೆ ಏಕಾಏಕಿ ಬಿರುಗಾಳಿ ಬೀಸಿದ್ದು, ಪ್ರಮುಖ ಸ್ಥಳಗಳಲ್ಲಿ ಹಾಕಲಾಗಿದ್ದ ಪ್ರಚಾರದ ಫ್ಲೆಕ್ಸ್‌ಗಳು ಕಿತ್ತುಹೋಗಿವೆ.
ತಾಲೂಕಿನ ಕೆ.ಕಾಟಾಪುರದ ಜಮೀನಿನಲ್ಲಿನ ಶ್ಯಾಮಮ್ಮ ಎನ್ನುವವರ ಮನೆಯ ಛಾವಣಿಯ ತಗಡುಗಳು ಹಾರಿ ಹೋಗಿವೆ. ಅದೃಷ್ಟವಶಾತ್ ಮನೆಯವರು ಗಾಳಿ ಬೀಸಿದಾಗ ಬೇರೆಡೆಗೆ ತೆರಳಿದ್ದರಿಂದ ಪ್ರಾಣಾಪಾಯವಾಗಿಲ್ಲ. ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆಯಾಗಿದ್ದು, ಕೆ.ಕಾಟಾಪುರದಲ್ಲಿ ಭತ್ತದ ಗದ್ದೆ ನೆಲಕಚ್ಚಿದೆ.