ವಾಯು ಮಾಲಿನ್ಯದಿಂದ ಚಾಲಕರಿಗೆ ಹೃದಯಾಘಾತ

UNTILETED 19
Published on

ಕನಕಗಿರಿ: ಮನುಷ್ಯನ ಆಧುನಿಕ ಜೀವನ ಶೈಲಿಯೇ ಹೃದಯಾಘಾತಕ್ಕೆ ಕಾರಣ ಎಂದು ಮಧುಮೇಹ ಹಾಗೂ ಹೃದ್ರೋಗ ತಜ್ಞ ಭಾನು ಪ್ರತಾಪ್ ಹೇಳಿದರು.

ಪಟ್ಟಣದ 9 ಮತ್ತು 10ನೇ ವಾರ್ಡ್‌ನ ಕೌಡೇಪೀರ ಯುವಕರ ಕಮಿಟಿಯಿಂದ ಸೋಮವಾರ ಆಯೋಜಿಸಿದ್ದ ಆರೋಗ್ಯ ಹಬ್ಬ ಹಾಗೂ ಹೃದಯ ಸಂಬಂಧಿ ವಿಶೇಷ ಉಪನ್ಯಾಸ, ಸೂಲಗಿತ್ತಿಯರಿಗೆ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೊಡ್ಡದಾದ ಮಾನವನ ದೇಹದಲ್ಲಿ ಮುಷ್ಠಿಯಷ್ಟಿರುವ ಹೃದಯವು ಅತ್ಯಂತ ಪ್ರಮುಖವಾಗಿದೆ. ಅದು ತನ್ನ ಕೆಲಸ ನಿಲ್ಲಿಸಿದರೆ ಆಯುಷ್ಯ ಮುಗಿದಂತೆ. ಜೀವನ ಶೈಲಿಯೇ ಇದಕ್ಕೆಲ್ಲಾ ಕಾರಣ. ಮನುಷ್ಯ ಅತಿಯಾದ ಆಸೆಯಿಂದ ಒತ್ತಡದ ಜೀವನಕ್ಕೆ ಒಳಗಾಗುತ್ತಿದ್ದಾನೆ. ಇದರಿಂದ ಕಾಯಿಲೆಗಳು ಬರುತ್ತಿವೆ. ಪ್ರತಿನಿತ್ಯ ಯೋಗ, ವ್ಯಾಯಾಮ, ಧ್ಯಾನ ಸೇರಿದಂತೆ ಹಣ್ಣು, ತರಕಾರಿಗಳನ್ನು ಸೇವಿಸುವುದರಿಂದ ದೇಹದ ಆರೋಗ್ಯ ಕಾಪಾಡಿಕೊಳ್ಳಬಹುದು ಎಂದರು.

ಹಾಸನ ಸೇರಿ ಇತರ ಜಿಲ್ಲೆಗಳಲ್ಲಿ ವಾಹನ ಚಾಲಕರೇ ಹೆಚ್ಚಾಗಿ ಹೃದಯಾಘಾತದಿಂದ ಸಾವನಪ್ಪುತ್ತಿರುವುದು ವಾಯು ಮಾಲಿನ್ಯ, ಒತ್ತಡ ಕಾರಣವಾಗಿದೆ. ಮುಂಜಾಗ್ರತಾ ಕ್ರಮ ಅನುಸರಿಸಬೇಕೆಂದರು. ಕೊಪ್ಪಳದ ಕಿಮ್ಸ್ ಆಸ್ಪತ್ರೆಯ ಆಡಳಿತ ಪರಿಷತ್ ಸದಸ್ಯ ಡಾ. ಸಿದ್ದರಾಮೇಶ ಮಾತನಾಡಿದರು.

ಅನೇಕ ವರ್ಷಗಳಿಂದ ಹಲವು ಗರ್ಭಿಣಿಯರ ಸುಸೂತ್ರ ಹೆರಿಗೆ ಮಾಡಿಸಿ ನಿಸ್ವಾರ್ಥ ಸೇವೆ ಸಲ್ಲಿಸಿದ ಸೂಲಗಿತ್ತಿಯರಾದ ಹೊನ್ನೂರಮ್ಮ, ಸಗರಮ್ಮ, ಪಾತಮ್ಮ ಅವರನ್ನು ಸನ್ಮಾನಿಸಲಾಯಿತು. ಪತ್ರಕರ್ತ ಮಹಿಬೂಬ ಗಂಗಾವತಿ ಪ್ರಾಸ್ತಾವಿಕ ನುಡಿಗಳನ್ನಾಡಿದರು.

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರ ವೈದ್ಯಾಧಿಕಾರಿ ಸಹನಾ, ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಹಜರತ್ ಮುಜಾವರ, ಬಿಜೆಪಿ ಮಂಡಲ ಅಧ್ಯಕ್ಷ ಸಣ್ಣ ಕನಕಪ್ಪ, ಕಾಂಗ್ರೆಸ್ ವಕ್ತಾರ ಶರಣಪ್ಪ ಭತ್ತದ್, ಪಪಂ ಅಧ್ಯಕ್ಷೆ ಹುಸೇನಬಿ ಚಳ್ಳಮರದ್, ಉಪಾಧ್ಯಕ್ಷ ಕಂಠಿರಂಗಪ್ಪ ನಾಯಕ, ಸದಸ್ಯರಾದ ಸಂಗಪ್ಪ ಸಜ್ಜನ್, ರಾಕೇಶ ಕಂಪ್ಲಿ, ಹನುಮಂತ ಬಸರಿಗಿಡ, ಮಾಜಿ ಜಿಪ ಸದಸ್ಯ ವೀರೇಶ ಸಮಗಂಡಿ, ಆಪ್ತ ಸಮಾಲೋಚಕ ಸಿದ್ದರಾಮಪ್ಪ ಇತರರಿದ್ದರು. ಶಿಕ್ಷಕ ಮೌನೇಶ್ ಬಡಿಗೇರ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net