

ಕನಕಗಿರಿ: ದೇಶದ ಭವಿಷ್ಯ ರೂಪಿಸುವ ಯುವಜನಾಂಗ ಮೊಬೈಲ್ ಗೀಳಿಗೆ ಅಂಟಿಕೊಂಡು ಆರೋಗ್ಯದ ಕಡೆಗೆ ಗಮನ ಕೊಡದಿರುವುದು ಆತಂಕಕಾರಿ ಬೆಳವಣಿಗೆ ಎಂದು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರದ ದಂತ ವೈದ್ಯೆ ಬೀನಾದೇವಿ ಕಳವಳ ವ್ಯಕ್ತಪಡಿಸಿದರು.
ಪಟ್ಟಣದ ಪಂಪಣ್ಣ ಶರಣಪ್ಪ ಗುಗ್ಗಳಶೆಟ್ರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಎನ್ನೆಸ್ಸೆಸ್, ರೆಡ್ ರಿಬ್ಬನ್ ಕ್ಲಬ್ ಹಾಗೂ ರೆಡ್ ಕ್ರಾಸ್ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಏಡ್ಸ್ ಜಾಗೃತಿ, ರೆಡ್‌ಕ್ರಾಸ್ ದಿನಾಚರಣೆ ಹಾಗೂ ದಂತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಭಾರತ ಅತೀ ಹೆಚ್ಚು ಮೊಬೈಲ್ ಬಳಸುವ ದೇಶ. ಅದರಲ್ಲೂ ಬಳಕೆಯಲ್ಲಿ ಯುವಕರು ಮುಂದಿದ್ದಾರೆ. ದುಶ್ಚಟಗಳಿಗೆ ದಾಸರಾಗುತ್ತಿರುವುದರಿಂದ ಮಾನಸಿಕ ಸ್ಥಿಮಿತ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ದುಶ್ಚಟಗಳಿಂದ ದೂರವಿದ್ದು, ಪಠ್ಯದ ವಿಷಯಗಳನ್ನು ಜ್ಞಾನಾರ್ಜನೆ ಮಾಡಿಕೊಳ್ಳಬೇಕು. ಉನ್ನತ ಗುರಿಯತ್ತ ಸಾಗಬೇಕೆಂದು ಕಿವಿಮಾತು ಹೇಳಿದರು.
ಆರೋಗ್ಯ ಆಪ್ತ ಸಮಾಲೋಚಕಿ ಪಲ್ಲವಿ ಮಾತನಾಡಿ, ವಿದ್ಯಾರ್ಥಿಗಳು ಉಪನ್ಯಾಸಕರು ನೀಡಿದ ಪಾಠ-ಪ್ರವಚನಗಳಿಂದ ಏಳ್ಗೆಗೆ ಶ್ರಮಿಸಬೇಕು. ಪಾಲಕರ ಆಶೀರ್ವಾದದಿಂದ ಮುನ್ನಡೆಯಬೇಕು. ಮಾನಸಿಕ, ದೈಹಿಕ, ಸಾಮಾಜಿಕವಾಗಿ ಸರಿ ಇದ್ದಾಗ ಮಾತ್ರ ಪ್ರಗತಿ ಹೊಂದಲು ಸಾಧ್ಯ ಎಂದರು.