

ಕನಕಗಿರಿ: ಹಡಪದ ಅಪ್ಪಣ್ಣ ಬಸವಣ್ಣನವರಿಗೆ ಪ್ರಿಯವಾಗಿದ್ದರಿಂದ ಅವರನ್ನು ಅನುಭವ ಮಂಟಪದಲ್ಲಿ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದರು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಹೇಳಿದರು.
ಇಲ್ಲಿನ ಪರಿವೀಕ್ಷಣಾ ಮಂದಿರ ಬಳಿಯ ಹಡಪದ ಅಪ್ಪಣ್ಣ ವೃತ್ತದಲ್ಲಿ ಹಮ್ಮಿಕೊಂಡಿದ್ದ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮದಲ್ಲಿ ಗುರುವಾರ ಮಾತನಾಡಿದರು.
ಆಗಿನ ಕಾಲದಲ್ಲಿ ಮೇಲ್ಜಾತಿಯವರು ಕ್ಷೌರಿಕರನ್ನು ಕಂಡರೆ ಅಪಶಕುನ ಎನ್ನುವ ಭಾವನೆಯಿತ್ತು. ಇದನ್ನು ಹೋಗಲಾಡಿಸಲು ಬಸವಣ್ಣನವರು ತನಗೆ ಆತ್ಮೀಯರಾದ ಅಪ್ಪಣ್ಣನವರನ್ನು ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿಕೊಂಡಿದ್ದಲ್ಲದೇ, ತನ್ನನ್ನು ಭೇಟಿ ಮಾಡಲು ಬರುವವರು ಮೊದಲು ಅಪ್ಪಣ್ಣ ಅವರನ್ನು ಭೇಟಿಯಾಗಿ ಬರುವಂತೆ ಸೂಚಿಸುತ್ತಿದ್ದರು. ಅಂಥ ಆತ್ಮೀಯತೆಯನ್ನು ಹಡಪದ ಅಪ್ಪಣ್ಣರೊಂದಿಗೆ ಬಸವಣ್ಣನವರು ಹೊಂದಿದ್ದರು. ಅಪ್ಪಣ್ಣನವರಂತೆ ಅವರ ಪತ್ನಿಯೂ ಬಸವಣ್ಣನವರ ಅನುನಾಯಿಯಾಗಿದ್ದು, ವಚನ ಕ್ರಾಂತಿಯಲ್ಲಿ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು.
ಪಪಂ ಮುಖ್ಯಾಧಿಕಾರಿ ಲಕ್ಷ್ಮಣ ಕಟ್ಟಿಮನಿ, ಕಂದಾಯ ನಿರೀಕ್ಷಕ ಮಂಜುನಾಥ ಹಿರೇಮಠ, ಪಪಂ ಸಿಬ್ಬಂದಿ ಪ್ರಕಾಶ ಮಹಿಪತಿ, ಸಮಾಜದವರು ಇದ್ದರು.