

ಕನಕಗಿರಿ: ಉದ್ಯೋಗ ಅರಸಿ ಜನರು ಗುಳೆ ಹೋಗಿರುವ ತಾಲೂಕಿನ ಅಡವಿಬಾವಿ ಚಿಕ್ಕತಾಂಡಾಕ್ಕೆ ಸೋಮವಾರ ಗೌರಿಪುರ ಗ್ರಾಪಂ ಪ್ರಭಾರ ಪಿಡಿಒ ಹನುಮಂತಪ್ಪ ಭೇಟಿ ನೀಡಿದರು.
ತಾಂಡಾದ ಮನೆಗಳಿಗೆ ಪಿಡಿಒ ಭೇಟಿ ನೀಡಿ, ಜನರಿಗೆ ಆಗುತ್ತಿರುವ ಸಮಸ್ಯೆಗಳನ್ನು ತಿಳಿದುಕೊಂಡರು. ಇದೇ ಸಂದರ್ಭದಲ್ಲಿ ಗುಳೆ ಹೋಗದಂತೆ ಮನವರಿಕೆ ಮಾಡಲು ಮುಂದಾದರು.
ಉದ್ಯೋಗ ಖಾತ್ರಿ ಇದ್ದರೂ ನಮಗೆ ಉಪಯೋಗವಿಲ್ಲದಂತಾಗಿದೆ. ಮೇ ತಿಂಗಳಲ್ಲಿ ನೀಡಿದ 15 ದಿನಗಳ ಕೆಲಸಕ್ಕೆ 400 ರೂ.ನಿಂದ 800 ರೂ. ಕೂಲಿ ಬಂದಿದೆ. ಇದರಿಂದ ಜೀವನ ಸಾಗಿಸಲು ಕಷ್ಟವಾಗುತ್ತದೆ. ನರೇಗಾ ಕೆಲಸವನ್ನು ನೀಡುತ್ತಿಲ್ಲ. ಈಗಾಗಲೇ ತಾಂಡಾದ 200 ಜನರು ಗಂಟು ಮೂಟೆಯೊಂದಿಗೆ ವಾಹನಗಳಲ್ಲಿ ಮೈಸೂರು, ಮಂಡ್ಯಕ್ಕೆ ಕಬ್ಬು ಕಟಾವು ಮಾಡಲು ತೆರಳಿದ್ದಾರೆ.
ವೃದ್ಧರು, ಮಕ್ಕಳು ಅಲ್ಲಲ್ಲಿ ಕಾಣಿಸಿಕೊಂಡರೆ, ಇನ್ನಷ್ಟು ಜನ ಗುಳೆ ಹೋಗಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ ಎಂದು ನಿವಾಸಿಗಳು ಅಲವತ್ತುಕೊಂಡರು. ವಿಜಯವಾಣಿ ಪತ್ರಿಕೆಯಲ್ಲಿ ಜು.15 ರಂದು ‘ಉದ್ಯೋಗ ಅರಸಿ ಗುಳೆ ಹೊರಟ ಜನರು’ ಶೀರ್ಷಿಕೆಯಡಿ ಸುದ್ದಿ ಪ್ರಕಟಗೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.