ಗ್ಯಾರಂಟಿಗಳು ಅರ್ಹರಿಗೆ ತಲುಪಲು ಶ್ರಮವಹಿಸಿ

Progress Review Meeting
ಕನಕಗಿರಿಯ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಹಜರತ್ ಹುಸೇನ್ ಅಧ್ಯಕ್ಷತೆಯಲ್ಲಿ ಪರಿಶೀಲನಾ ಸಭೆ ನಡೆಯಿತು. ತಾಪಂ ಸಿಬ್ಬಂದಿ ಕೊಟ್ರೇಶ, ಸಂಚಾರ ನಿಯಂತ್ರಕ ಶ್ರೀರಾಮ್ ಇತರರಿದ್ದರು.
Published on

ಕನಕಗಿರಿ: ಅರ್ಹ ಫಲಾನುಭವಿಗಳಿಗೆ ಪಂಚ ಗ್ಯಾರಂಟಿ ಯೋಜನೆಗಳು ತಲುಪಲು ಅಧಿಕಾರಿಗಳು ಕ್ರಮವಹಿಸಬೇಕು ಎಂದು ತಾಲೂಕು ಮಟ್ಟದ ಗ್ಯಾರಂಟಿ ಯೋಜನೆಗಳ ಪ್ರಾಧಿಕಾರ ಅಧ್ಯಕ್ಷ ಹಜರತ್ ಹುಸೇನ್ ಸೂಚಿಸಿದರು.

ಇಲ್ಲಿನ ತಾಪಂ ಕಚೇರಿಯ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯಿಂದ ಹಮ್ಮಿಕೊಂಡಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಆರಂಭದಲ್ಲಿ ಗೃಹಜ್ಯೋತಿ ಯೋಜನೆ ಕುರಿತು ಮಾತನಾಡಿದ ಅವರು, ಯೋಜನೆಯಿಂದ ಹೊರಗುಳಿದಿರುವ ಫಲಾನುಭವಿಗಳನ್ನು ಗುರುತಿಸಿ ಶೇ.100 ಪ್ರಗತಿ ಸಾಧಿಸಲು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು. ಯೋಜನೆ ಕುರಿತು ಹೆಚ್ಚು ಪ್ರಚುರಪಡಿಸಲು ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಬ್ಯಾನರ್ ಅಳವಡಿಸುವಂತೆ ತಿಳಿಸಿದರು.

ಸಾರಿಗೆ ಇಲಾಖೆ ಗಂಗಾವತಿ ವಿಭಾಗದ ಡಿಪೋ ಮ್ಯಾನೇಜರ್ ಸತತ ನಾಲ್ಕು ಸಭೆಗಳಿಗೆ ಗೈರಾಗಿ ಅವರ ಅಧೀನ ನೌಕರನನ್ನು ನಿಯೋಜನೆಗೊಳಿಸಿ ಸಭೆಗೆ ಕಳುಹಿಸಿದ್ದರಿಂದ ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು. ಇನ್ನು ಮುಂದಿನ ಪ್ರಗತಿ ಪರಿಶೀಲನಾ ಸಭೆಗೆ ಕಡ್ಡಾಯವಾಗಿ ಹಾಜರಾಗುವಂತೆ ಸೂಚಿಸಿದರು.

ಇದೇ ವೇಳೆ ಕನಕಗಿರಿ ಉತ್ಸವಕ್ಕೆ ಆಗಮಿಸುವ ಗ್ರಾಮೀಣ ಭಾಗದ ಸಾರ್ವಜನಿಕರಿಗೆ ಹೆಚ್ಚಿನ ಬಸ್ ಸೌಕರ್ಯ ಒದಗಿಸಲು ಸೂಕ್ತ ಕ್ರಮ ಕೈಗೊಳ್ಳಲು ತಿಳಿಸಿದರು. ಯುವನಿಧಿ ಯೋಜನೆ ಕುರಿತು ಉತ್ಸವದಲ್ಲಿ ಹೆಚ್ಚಿನ ಪ್ರಚುರಪಡಿಸುವುದರ ಜತೆಗೆ ಸಂಬಂಧಿಸಿದ ಇಲಾಖೆಯಿಂದ ಉದ್ಯೋಗ ಮೇಳ ಆಯೋಜನೆಗೆ ಕ್ರಮ ಕೈಗೊಳ್ಳಲು ತಿಳಿಸಿದರು.

ಬಳಿಕ ಉಳಿದ ಯೋಜನೆ ಕುರಿತು ಚರ್ಚಿಸಿ ಶೇ.100 ಪ್ರಗತಿ ಸಾಧಿಸಲು ಅನುಷ್ಠಾನ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು. ತಾಪಂ ಇಒ ಕೆ.ರಾಜಶೇಖರ್, ಸಿಡಿಪಿಒ ವಿರೂಪಾಕ್ಷಿ, ಸಂಚಾರ ನಿಯಂತ್ರಕ ಶ್ರೀರಾಮ್, ಸಮಿತಿಯ ನೀಲಕಂಠ ಬಡಿಗೇರ, ಕರಿಯಪ್ಪ ನಾಯಕ, ಜಗದೀಶ ಅಂಗಡಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net