

ಕನಕಗಿರಿ: ಬೇಸಿಗೆ ಆರಂಭವಾಗುತ್ತಿದ್ದು, ತಾಲೂಕು ವ್ಯಾಪ್ತಿಯಲ್ಲಿ ಜನ ಜಾನುವಾರುಗಳಿಗೆ ಕುಡಿವ ನೀರಿಗೆ ಸಮಸ್ಯೆಯಾಗುವ ಗ್ರಾಮಗಳನ್ನು ಗುರುತಿಸಿ ವರದಿ ಸಲ್ಲಿಸಬೇಕು ಎಂದು ತಹಸೀಲ್ದಾರ್ ವಿಶ್ವನಾಥ ಮುರುಡಿ ಪಿಡಿಒಗಳಿಗೆ ಸೂಚಿಸಿದರು.
ಇಲ್ಲಿನ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕಿನ ಪಿಡಿಒಗಳ ತುರ್ತು ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬೇಸಿಗೆ ಆರಂಭಕ್ಕೂ ಮುನ್ನವೇ ತಾಲೂಕಿನ ಹಲವು ಗ್ರಾಮಗಳಲ್ಲಿ ಕುಡಿವ ನೀರಿಗೆ ತೊಂದರೆಯಾಗಿರುವ ಮಾಹಿತಿಯಿದೆ. ಗ್ರಾಪಂ ವ್ಯಾಪ್ತಿಯ ಹಳ್ಳಿ ಅಥವಾ ಪಟ್ಟಣದಲ್ಲಿ ನೀರಿನ ಸಮಸ್ಯೆ ಇದ್ದರೆ ಆ ಪ್ರದೇಶವನ್ನು ಗುರುತಿಸಿ ತ್ವರಿತವಾಗಿ ವರದಿ ಸಲ್ಲಿಸಬೇಕು. ಸಮಸ್ಯಾತ್ಮಕ ಗ್ರಾಮಗಳಿಗೆ ಪರಿಹಾರ ಒದಗಿಸಲು ಪಿಡಿಒಗಳು ಮುಂದಾಗಬೇಕು ಎಂದು ಆದೇಶಿಸಿದರು.
ಕೆಲ ಗ್ರಾಮಗಳಲ್ಲಿ ಸೊಳ್ಳೆ ಕಾಟ ವಿಪರಿತವಾಗಿ ಕಂಡು ಬರುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಪಂಚಾಯಿತಿ ಸಿಬ್ಬಂದಿ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕೆಲಸ ಮಾಡಬೇಕು. ಸೊಳ್ಳೆ ಹಾವಳಿಗೆ ಮುಂಜಾಗ್ರತಾ ಕ್ರಮ ತಕ್ಷಣಕ್ಕೆ ಕೈಗೊಂಡು, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಸೂಚಿಸಿದರು.
ಟಿಎಚ್‌ಒ ಶರಣಪ್ಪ ಚಕೋಟಿ, ತಾಪಂ ಇಒ ಟಿ.ರಾಜಶೇಖರ, ತಾಪಂ ಸಹಾಯಕಿ ನಿರ್ದೇಶಕಿ ಶರಪೂನ್ನಿಸಾ ಬೇಗಂ, ಪಿಡಿಒಗಳಾದ ಯು. ಮಲ್ಲಿಕಾರ್ಜುನ, ಲಕ್ಷ್ಮಣ, ಅಮರೇಶ ರಾಠೋಡ, ನಾಗೇಶ ಪೂಜಾರ, ತಾಪಂ ಸಿಬ್ಬಂದಿ ಇದ್ದರು.