

ಕನಕಗಿರಿ: ಯಲಬುರ್ಗಾ ತಾಲೂಕಿನ ಹಿರೇಮ್ಯಾಗೇರಿ ಗ್ರಾಪಂ ಪಿಡಿಒ ರತ್ನಮ್ಮ ಗುಂಡಣ್ಣನವರ್ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಕಾನೂನು ಕ್ರಮಕ್ಕೆ ಆಗ್ರಹಿಸಿ ಆರ್‌ಡಿಪಿಆರ್ ನೌಕರರ ತಾಲೂಕು ಘಟಕ, ರಾಜ್ಯ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ತಾಲೂಕು ಘಟಕ ಹಾಗೂ ತಾಲೂಕು ನೌಕರರ ಸಂಘದವರು ತಾಪಂ ಇಒ ಕೆ.ರಾಜಶೇಖರ್ ಹಾಗೂ ತಹಸೀಲ್ದಾರ್ ವಿಶ್ವನಾಥ ಮುರುಡಿ ಮೂಲಕ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗೆ ಸೋಮವಾರ ಮನವಿ ಸಲ್ಲಿಸಿದರು.
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ತಾಲೂಕು ಅಧ್ಯಕ್ಷರಾದ ನಾಗೇಶ್ ಮಾತನಾಡಿ, ಪಿಡಿಒ ರತ್ನಮ್ಮ ಅವರಿಗೆ ಅದೇ ಗ್ರಾಪಂ ಸದಸ್ಯೆ ಶಾಂತಮ್ಮ ಬಂಡಿವಡ್ಡರ್ ಹಾಗೂ ಅವರ ಮಗ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾರೆ. ಇಂಥಹ ಘಟನೆಯಿಂದ ಪಿಡಿಒಗಳು ಹಾಗೂ ಅಧಿಕಾರಿಗಳ ಆತ್ಮಸ್ಥೈರ್ಯ ಕುಗ್ಗಿದೆ. ಎಲ್ಲ ಅಧಿಕಾರಿಗಳು ಹಾಗೂ ನೌಕರರಿಗೆ ಕಚೇರಿ ಸಮಯದಲ್ಲಿ ಸೂಕ್ತ ಭದ್ರತೆ ಮತ್ತು ರಕ್ಷಣೆ ವ್ಯವಸ್ಥೆ ಕಲ್ಪಿಸಬೇಕು. ಹಲ್ಲೆ ಮಾಡಿದ ಸದಸ್ಯೆಯ ಸದಸ್ಯತ್ವ ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಗ್ರಾಪಂ ಪಿಡಿಒಗಳಾದ ವೀರಣ್ಣ ನಕ್ರಳ್ಳಿ, ಬಸವರಾಜ್ ಸಂಕನಾಳ, ಯು. ಮಲ್ಲಿಕಾರ್ಜುನ, ಲಕ್ಷ್ಮಣ್, ನಾಗಲಿಂಗಪ್ಪ, ಹನುಮಂತಪ್ಪ, ಗ್ರಾಪಂ ಕಾರ್ಯದರ್ಶಿಗಳಾದ ಕೊಟ್ರಯ್ಯಸ್ವಾಮಿ, ವೆಂಕೋಬ, ರೇಣುಕಮ್ಮ, ಗಂಗಪ್ಪ ಹಾಗೂ ನೌಕರರ ಸಂಘದ ಪದಾಧಿಕಾರಿಗಳಿದ್ದರು.